ADVERTISEMENT

ಕಾಯ್ದೆ ತಿದ್ದುಪಡಿ ಪ್ರತಿ ಹರಿದು ದಹಿಸಿದ ಕಾಗೋಡು

ಕಾಗೋಡು ಗ್ರಾಮದಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:38 IST
Last Updated 20 ಸೆಪ್ಟೆಂಬರ್ 2020, 15:38 IST
ಸಾಗರ ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾಯ್ದೆಯ ತಿದ್ದುಪಡಿ ಪ್ರತಿಯನ್ನು ಹರಿದು ದಹಿಸಿದರು.
ಸಾಗರ ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾಯ್ದೆಯ ತಿದ್ದುಪಡಿ ಪ್ರತಿಯನ್ನು ಹರಿದು ದಹಿಸಿದರು.   

ಸಾಗರ: ಐತಿಹಾಸಿಕ ಕಾಗೋಡು ಸತ್ಯಾಗ್ರಹ ನಡೆದು ‘ಉಳುವವನೆ ಹೊಲದೊಡೆಯ’ ಘೋಷಣೆಯ ಮೂಲಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬರಲು ಕಾರಣವಾಗಿದ್ದ ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ಭಾನುವಾರ ಮತ್ತೆ ಪ್ರತಿಭಟನೆಯ ಕೂಗು ಎದ್ದಿದೆ.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾಯ್ದೆಯ ತಿದ್ದುಪಡಿ ಪ್ರತಿಯನ್ನು ಹರಿದು ದಹನ ಮಾಡಿದರು. ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂಬ ಪ್ರತಿಜ್ಞಾವಿಧಿಯನ್ನು ಕಾಗೋಡು ಬೋಧಿಸಿದರು.

ಇದಕ್ಕೂ ಮುನ್ನ ಕಾಗೋಡು ಗ್ರಾಮಸ್ಥರಿಂದ ಸಂಗ್ರಹಿಸಿದ ಹಿಡಿ ಮಣ್ಣಿನ ಚೀಲವನ್ನು ಮಾಜಿ ಶಾಸಕ, ವಿಧಾನ ಪರಿಷತ್‌ನ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ್ ಅವರಿಗೆ ಹಸ್ತಾಂತರಿಸಿದರು. ಈ ಮಣ್ಣನ್ನು ಬೆಂಗಳೂರಿನಲ್ಲಿರುವ ದೇವರಾಜ ಅರಸು ಅವರ ಪ್ರತಿಮೆಗೆ ಅರ್ಪಿಸಲಾಗುವುದು ಎಂದು ಬಿ.ಆರ್. ಪಾಟೀಲ್ ಘೋಷಿಸಿದರು.

ADVERTISEMENT

ಕಾಗೋಡು ತಿಮ್ಮಪ್ಪ ಮಾತನಾಡಿ, ‘ಸಾಮಾಜಿಕ ಸಮಾನತೆಯ ಸಿದ್ಧಾಂತವನ್ನು ಬಿಜೆಪಿ ತನ್ನ ಅಧಿಕಾರವನ್ನು ಬಳಸಿ ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಿದೆ. ಬಡವರಿಗೆ ಭೂಮಿಯ ಹಕ್ಕು ಕೊಡಿಸುವ ವಿಚಾರದಲ್ಲಿ ಆ ಪಕ್ಷಕ್ಕೆ ಯಾವುದೇ ಆಸಕ್ತಿ ಇಲ್ಲ. ಅರಣ್ಯ ಭೂಮಿ ಹಕ್ಕು ಕಾಯ್ದೆ ಅನುಷ್ಠಾನಕ್ಕೂ ಬಿಜೆಪಿ ಮುಖಂಡರು ಮುಂದಾಗುತ್ತಿಲ್ಲ. ಈ ತಪ್ಪಿಗೆ ಅವರು ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಗುಡುಗಿದರು.

ಬಿ.ಆರ್. ಪಾಟೀಲ್ ಮಾತನಾಡಿ, ‘ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಮತ್ತೆ ಜಮೀನ್ದಾರಿ ಪದ್ಧತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಇದನ್ನು ವಿರೋಧಿಸಿ ಸೈದ್ಧಾಂತಿಕವಾದ ಹೋರಾಟ ರಾಜ್ಯದಾದ್ಯಂತ ನಡೆಯಬೇಕಿದೆ. ಈ ಸಂಬಂಧ ಕಾಗೋಡಿನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಲು ಸಿದ್ದ’ ಎಂದು ಘೋಷಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.