ಶಿವಮೊಗ್ಗ: ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಆಳವಾಗಿ ಒಡಮೂಡಬೇಕಾಗಿದ್ದ ಕನ್ನಡದ ಬೇರು ಆಧುನಿಕತೆಯ ಬಾಣಕ್ಕೆ ಸಿಲುಕಿ ಹಾಳಾಗಿ ಹೋಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ನಗರದ ಎ.ಟಿ.ಎನ್.ಸಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪದವಿ ಕನ್ನಡ ಪಠ್ಯಪುಸ್ತಕಗಳು: ಸಾಧ್ಯತೆಗಳು ಹಾಗೂ ಸವಾಲುಗಳು ವಿಚಾರ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ ಹಾಳಾಗುತ್ತಿರುವ ಕನ್ನಡ ಬೇರಿನಿಂದ ಭಾಷೆಯ ನಿಜವಾದ ಅವನತಿ ಪ್ರಾರಂಭವಾದಂತೆ. ಮೊದಲು ಶಿಕ್ಷಕರು ಮಕ್ಕಳಿಗೆ ಕನ್ನಡ ಕಲಿಸುವತ್ತ ಆಸಕ್ತಿ ತೋರಬೇಕು. ಎಷ್ಟೇ ಉತ್ತಮ ಪಠ್ಯ ಕೊಟ್ಟರೂ ಶಿಕ್ಷಕರು ಸರಿಯಾಗಿ ಕಲಿಸದೇ ಇದ್ದರೆ, ಎಲ್ಲವೂ ವ್ಯರ್ಥ. ಹೀಗೆ ಮುಂದುವರೆದರೆ ಮುಂದಿನ ಐದು ವರ್ಷಗಳಲ್ಲಿ ಕನ್ನಡದ ಶಾಲೆಗಳು ಮುಚ್ಚಿಹೋಗುವುದರಲ್ಲಿ ಆಶ್ಚರ್ಯವಿಲ್ಲ ಎಂದರು.
‘ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಹೇಳಿಕೊಡುವ ವಿಧಾನ 50 ವರ್ಷ ಹಿಂದಿನದ್ದಾಗಿದೆ. ಪುಸ್ತಕದ ಭಾರದ ಆಧಾರದ ಮೇಲೆ ಕಲಿಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಕನ್ನಡ ಪುಸ್ತಕಗಳನ್ನು ತಾಂತ್ರಿಕವಾಗಿ ರೂಪಿಸುವ ಅಗತ್ಯವಿದೆ. ಕುಮಾರವ್ಯಾಸರ ಗಮಕ ಕೇಳುವ ಮನಃಸ್ಥಿತಿಯನ್ನು ಕನ್ನಡದ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ. ಮೇಷ್ಟ್ರಿಗೆ ಗಮಕ ಪಾಠ ಮಾಡಲು ಬರುವುದಿಲ್ಲ ಎನ್ನುವಾಗ, ತಮ್ಮನ್ನು ತಾವು ಇಂತಹ ಕಮ್ಮಟಗಳ ಮೂಲಕ ಉನ್ನತಿಕರಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
‘ಇತ್ತೀಚೆಗೆ ಕ್ರಿಟಿಕಲ್ ಥಿಂಕಿಂಗ್ ಬಂದುಬಿಟ್ಟಿದೆ. ಕಣ್ಣಿಗೆ ಕಾಣುವ ಯಾವ ವಿಷಯಗಳನ್ನೂ ನಂಬದೆ, ವಿಮರ್ಶಿಸಿಯೇ ಸ್ವೀಕರಿಸುವ ಕಾಲದಲ್ಲಿ ನಾವಿದ್ದೇವೆ. ನಿಮ್ಮ ಭವಿಷ್ಯದ ಜವಾಬ್ದಾರಿಗಳನ್ನು ನೀವೇ ತೆಗೆದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕನಿಷ್ಟ 2 ಲಕ್ಷ ಪದಗಳನ್ನು ಓದಬೇಕು’ ಎಂದರು.
‘ಸಾಮಾಜಿಕ ವಿಜ್ಞಾನದ ವಿಷಯಗಳಿಗೆ ಅನುದಾನವಿಲ್ಲ. ಕನ್ನಡವನ್ನು ಕೇವಲ ಸಾಹಿತ್ಯದ ಸಂವೇದನೆ ಎಂದಷ್ಟೇ ನೋಡಬಾರದು. ಕನ್ನಡದ ಮೇಷ್ಟು ಸೋಷಿಯಾಲಜಿಸ್ಟ್ ಮತ್ತು ಅಂತ್ರಪಾಲಾಜಿಸ್ಟ್ ಆಗಿಯೂ ಕಾರ್ಯನಿರ್ವಹಿಸಬೇಕು’ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಸಬೀತಾ ಬನ್ನಾಡಿ, ಉಪಾಧ್ಯಕ್ಷ ಕುಂಸಿ ಉಮೇಶ್ ಮಾತನಾಡಿದರು. ಪ್ರಾಂಶುಪಾಲರಾದ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುತ್ತಯ್ಯ, ಕಾರ್ಯಕ್ರಮ ಸಂಚಾಲಕ ಪ್ರವೀಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.