
ಕಾರ್ಗಲ್: ಸಮೀಪದ ಲಿಂಗನಮಕ್ಕಿ ಪವರ್ ಚಾನಲ್‌ಗೆ ಅಳವಡಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆಯಲ್ಲಿ ಈ ಹಿಂದೆ ಬಿರುಕು ಕಾಣಿಸಿಕೊಂಡ ಕಾರಣ ಲೋಕಾಯುಕ್ತ ಕಾರ್ಯಾಲಯದ ಮುಖ್ಯ ಎಂಜಿನಿಯರ್ ಕಚೇರಿಯ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಲಾಶಯದ ಸ್ಲ್ಯೂಸ್ ಗೇಟ್ ಮುಂಭಾಗದಲ್ಲಿ ತಳಕಳಲೆ ಅಣೆಕಟ್ಟೆಗೆ ನೀರು ಹಾಯಿಸಲು ನಿರ್ಮಿಸಲಾಗಿರುವ ಲಿಂಗನಮಕ್ಕಿ ಪವರ್ ಚಾನಲ್‌ಗೆ ಹೆಚ್ಚುವರಿಯಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾರ್ಯ ಕೈಗೊಳ್ಳಲು ₹ 4.85 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. 2022ರಲ್ಲಿ ದಾವುಲ್ ಸಾಬ್ ಕಮ್ಮಟಗಿ ಎಂಬ ಗುತ್ತಿಗೆದಾರರು ಈ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆಯ ಮೂಲಕ ಕೈಗೊಂಡಿದ್ದರು.
ಎರಡೂ ದಂಡೆಯಲ್ಲಿ ನಿರ್ಮಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಪೂರ್ಣಗೊಂಡ 6 ತಿಂಗಳೊಳಗೆ ಬಿರುಕು ಬಿಟ್ಟಿತ್ತು. ‘ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ತಡೆಗೋಡೆ ಬಿರುಕು ಬಿಟ್ಟಿದ್ದಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ. ವಿಜಯಕುಮಾರ್ ಬೆಂಗಳೂರಿನ ಲೋಕಾಯುಕ್ತರ ಕಾರ್ಯಾಲಯದಲ್ಲಿ ದೂರು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಖುದ್ದು ಸ್ಥಳ ಪರಿಶೀಲನೆ ನಡೆಸಲು ಪರಮೇಶ್ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಕಾರ್ಗಲ್ ಪಟ್ಟಣದಲ್ಲಿರುವ ಕೆಪಿಸಿ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಭೇಟಿ ನೀಡಿತ್ತು. ಅಲ್ಲಿ ಕೆಪಿಸಿ ಅಧಿಕಾರಿಗಳ ಅಹವಾಲು ಮತ್ತು ದೂರುದಾರರ ಅಹವಾಲುಗಳನ್ನು ಕೇಳಿ ದಾಖಲಿಸಿದರು.
ಬಳಿಕ ಕಳಪೆ ಕಾಮಗಾರಿ ನಡೆದಿದೆ ಎನ್ನಲಾದ ಲಿಂಗನಮಕ್ಕಿ ಜಲಾಶಯದ ಸ್ಲ್ಯೂಸ್ ಗೇಟ್ ಮುಂಭಾಗದಲ್ಲಿ ಅನುಭವಿ ತಜ್ಞರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
‘ಶೀಘ್ರವಾಗಿ ಲಿಂಗನಮಕ್ಕಿ ಜಲಾಶಯದಿಂದ ಹೊರ ಹಾಯಿಸಲಾಗುತ್ತಿರುವ ನೀರನ್ನು ತಡೆದು ಸ್ಲ್ಯೂಸ್ ಗೇಟ್ ಮುಂಭಾಗದ ಪವರ್ ಚಾನಲ್ ತಳಭಾಗದಲ್ಲಿ ಆಗಿರಬಹುದಾದ ಅನಾಹುತಗಳನ್ನು ಪರಿಶೀಲನೆ ನಡೆಸಲು ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಬರಲಿದೆ’ ಎಂದು ದೂರುದಾರ ಕೆ. ವಿಜಯಕುಮಾರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.