ADVERTISEMENT

ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೆ ಆದೇಶ: ಸಿಎಂ ಬಿಎಸ್‌ವೈಗೆ ಆಯನೂರು ಕೃಜ್ಞತೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 12:22 IST
Last Updated 29 ಸೆಪ್ಟೆಂಬರ್ 2020, 12:22 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಬಾಕಿ ವೇತನ ಪಾವತಿ ಮಾಡಲು ಆದೇಶಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹೋರಾಟಕ್ಕೆ ಬೆಂಬಲ ನೀಡಿದವರಿಗೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕೃತಜ್ಞತೆ ಸಲ್ಲಿಸಿದರು.

ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ನಿಂದ ಆಗಸ್ಟ್‌ವರೆಗೆ ವೇತನ ಪಾವತಿಸದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಜೀವನ ನಿರ್ವಹಣೆಗೆ ಪರದಾಡುತ್ತಿದ್ದರು. ಅದಕ್ಕಾಗಿ ಹೋರಾಟ ಮಾಡುತ್ತಿದ್ದರು. ಈ ವಿಷಯ ವಿಧಾನ ಪರಿಷತ್‌ ಕಲಾಪದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಉನ್ನತ ಶಿಕ್ಷಣ ಸಚಿವರು ಗೈರು ಹಾಜರಾಗಿದ್ದ ಕಾರಣ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ವೇತನ ಬಿಡುಗಡೆಗೆ ಆದೇಶಿಸಿದರು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸ್ಮರಿಸಿದರು.

ವೇತನ ಬಿಡುಗಡೆ ಮಾಡುವಂತೆ ವಿಧಾನ ಪರಿಷತ್‌ನ ಮೂವರು ಸದಸ್ಯರು ಪ್ರಸ್ತಾವನೆ ಸಲ್ಲಿಸಿದ್ದರು. ಯಾವುದೇ ವೇತನ ಬಾಕಿ ಇಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದರಿಂದ ಕಠಿಣ ನಿಲುವು ತೆಗೆದುಕೊಳ್ಳಬೇಕಾಯಿತು. ವೇತನ ಬಿಡುಗಡೆಗೆ ಒತ್ತಾಯಿಸಿದೆವು ಎಂದು ವಿವರ ನೀಡಿದರು.

ಮೂರು ತಿಂಗಳ ವೇತನ ಒಂದು ವಾರದಲ್ಲಿ ಬಿಡುಗಡೆಯಾಗುವ ಭರವಸೆ ಇದೆ. ಅತಿಥಿ ಉಪನ್ಯಾಸಕರು ಧೈರ್ಯವಾಗಿರಬೇಕು. ಹಂತ ಹಂತವಾಗಿ ಉಳಿದ ಬೇಡಿಕೆ ಈಡೇರಿಸಲಾಗುವುದು. ರಾಜ್ಯದ 22 ಸಾವಿರ ಅತಿಥಿ ಶಿಕ್ಷಕರು, ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೂ ಪ್ರಯತ್ನ ಮಾಡಲಾಗುವುದು. ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಸಂಘಟಿತರಾಗಿ ಹೋರಾಟ ನಡೆಸಿದರೆ ಬೇಡಿಕೆ ಈಡೇರುತ್ತವೆ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.