ಆನವಟ್ಟಿ: ‘ಹಗ್ಗ ನೇಯ್ದು, ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವ ಕೊರಚ ಸಮುದಾಯವನ್ನು ಎಸ್‌ಸಿ ಒಳಮೀಸಲಾತಿ ಮೂರನೇ ಪಂಥಕ್ಕೆ ಸೇರಿಸುವ ಮೂಲಕ ಅನ್ಯಾಯ ಮಾಡಲಾಗಿದೆ. ಸಮುದಾಯವನ್ನು ಎಡ ಅಥವಾ ಬಲ ಪಂಥಕ್ಕೆ ಸೇರಿಸಿ. ಇಲ್ಲವೇ ಮೂರನೇ ಪಂಥಕ್ಕೆ ಶೇ 1 ಮೀಸಲಾತಿ ಹೆಚ್ಚಿಸಿ’ ಎಂದು ಬೆಂಗಳೂರು ಅಖಿಲ ಕರ್ನಾಟಕ ಕೊರಚ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಆದರ್ಶ ಎಲ್ಲಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ನೆಹರೂ ನಗರದ ಮಾರಿಕಾಂಬ ದೇವಸ್ಥಾನದ ಎದುರು ಸೋಮವಾರ ಹಮ್ಮಿಕೊಂಡಿದ್ದ 918ನೇ ಶಿವಶರಣ ನುಲಿಯ ಚಂದಯ್ಯನವರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶೈಕ್ಷಣಿಕ, ರಾಜಕೀಯ, ಆರ್ಥಿಕ ಹಾಗೂ ಸಮಾಜಿಕವಾಗಿ ಕೊರಚ ಸಮುದಾಯ ಹಿಂದೆ ಉಳಿದಿದ್ದು, ಸಂಘಟನೆಗೊಳ್ಳುವ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಿ ಸಮುದಾಯದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸುವ ಅವಶ್ಯಕತೆ ಇದೆ. ಸಮುದಾಯದವರು ಉನ್ನತ ಹುದ್ದೆಯಲ್ಲಿ ಯಾರೂ ಇಲ್ಲ. ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೂಡಿಸುವ ಮೂಲಕ ಹೆಚ್ಚು ಹೆಚ್ಚು ಸರ್ಕಾರಿ ನೌಕರಿಗಳನ್ನು ಪಡೆದುಕೊಳ್ಳಬೇಕು. ಶೈಕ್ಷಣಿಕ ಪ್ರಗತಿಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಿದೆ’ ಎಂದು ಹೇಳಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪುಂಡಲೀಕಪ್ಪ ಮಾತನಾಡಿ, ‘ತಿಮ್ಮಾಪುರ ಬಡಾವಣೆಯಲ್ಲಿ 40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದೇವೆ. ಕೊರಚ ಸಮುದಾಯದ ಯಾರೊಬ್ಬರಿಗೂ ಹಕ್ಕುಪತ್ರ ಸಿಕ್ಕಿಲ್ಲ. ಅಲೆಮಾರಿ ಬದುಕು ನಡೆಸಿ ಈಗ ಒಂದುಕಡೆ ನೆಲೆಸಿದ್ದೇವೆ. ನಮಗೆ ಹಕ್ಕುಪತ್ರ ಕೂಡಿಸಬೇಕು’ ಎಂದು ಮನವಿ ಮಾಡಿದರು.
ತಿಮ್ಮಾಪರ ಬಡಾವಣೆಯ ಕೊರಚರ ಬೀದಿಯಿಂದ, ಹೆದ್ದಾರಿಯ ವಿಠ್ಠಲ ರುಕುಮಾಯಿ ದೇವಸ್ಥಾನ ಮಾರ್ಗವಾಗಿ, ಮಾರಿಕಾಂಬ ದೇವಸ್ಥಾನದವರೆಗೂ ವಚನಕಾರ ನುಲಿಯ ಚಂದಯ್ಯ ಅವರ ಭಾವಚಿತ್ರ ಹಿಡಿದು, ವಿವಿಧ ಸಾಂಸ್ಕೃತಿಕ ಕಲಾಮೇಳಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಸಮುದಾಯದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಿದ್ದೇಶ್ ಮಾದಾಪುರ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಶಿವಮೊಗ್ಗ, ಉಪಾಧ್ಯಕ್ಷ ಕೆರಿಯಪ್ಪ ಆನವಟ್ಟಿ, ತಾಲ್ಲುಕು ಘಟಕದ ಗೌರವ ಅಧ್ಯಕ್ಷ ಹನುಮಂತಪ್ಪ ಬಾವಿಕಟ್ಟಿ, ಉಪಾಧ್ಯಕ್ಷರಾದ ಸಿ. ಅರುಣಕುಮಾರ್, ಸಚಿನ್ ಎಸ್. ಶಿಕಾರಿ, ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿ ಸಿ. ನಾಘರಾಜ, ಖಜಾಂಚಿ ಮಂಜಪ್ಪ ಬಿಳವಾಣಿ, ಮುಖಂಡರಾದ ಚೌಟಿ ಚಂದ್ರಶೇಖರ್ ಪಾಟೀಲ್, ಜೆ. ಚಂದ್ರಶೇಖರಪ್ಪ, ಮಧುಕೇಶ್ವರ್ ಪಾಟೀಲ್, ಸದಾನಂದ ಗೌಡ ಬಿಳಗಲಿ, ಅನೀಶ್ ಪಾಟೀಲ್, ವಿಜಯಮ್ಮ ಮೈಲಾರಪ್ಪ, ಗೀತಾ ಮಲ್ಲಿಕಾರ್ಜುನ್, ಪ್ರೇಮ ಗಂಗಾಧರ್, ರಮೇಶ್ ಬುಡುಗ, ಲಕ್ಕಪ್ಪ, ಮಲ್ಲಿ ಸುರೇಶ್, ಕೆ.ಎಸ್ ಮಂಜಪ್ಪ, ಕೆ. ಪ್ರದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.