
ಹೊಸನಗರ: ‘ಹೊಸನಗರ ವಿಧಾನಸಭಾ ಕ್ಷೇತ್ರ ಹರಿದು ಹಂಚಿಹೋಗಿರುವುದು ನಮಗೂ ಬೇಸರವಿದೆ. ಅದಕ್ಕಾಗಿಯೇ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ಸನ್ನಿಧಿಯಲ್ಲಿ ಬುಧವಾರ ನಡೆದ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ ಕಾರ್ಯಕ್ರಮದಲ್ಲಿ ದೇವರಿಗೆ ಅಭಿಷೇಕ ಪೂಜೆ ನೆರವೇರಿಸಿ ನಂತರ ಮಾತನಾಡಿದರು.
‘ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಆಗ ಅದಕ್ಕೆ ಬಲ ಹೆಚ್ಚು. ಅಂತಹ ಒಗ್ಗಟ್ಟಿನ ಪ್ರಯತ್ನ ಸಂತಸ ತಂದಿದೆ. ಎಲ್ಲರೂ ಒಂದಾಗಿ ಕ್ಷೇತ್ರದ ಉಳಿವಿಗಾಗಿ ಒಂದೇ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಬೇಕು’ ಎಂದು ಹೇಳಿದರು.
ವಿದ್ವಾನ್ ವಿನಾಯಕ ಭಟ್ ಗಾಳಿಮನೆ ಮಾತನಾಡಿ, ‘ವಿಷ್ಣು ಸಹಸ್ರನಾಮ ಎನ್ನುವುದು ಮನುಷ್ಯನ ಆರೋಗ್ಯಕ್ಕಿರುವ ಔಷಧವೂ ಹೌದು. ಅದರ ಪಠಣದಿಂದ ಮನಸ್ಸಿನ ನೆಮ್ಮದಿ ಸಾಧ್ಯ’ ಎಂದರು.
ಮಠದ ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಮಾತನಾಡಿದರು. ಇದಕ್ಕೂ ಮುನ್ನ ಬೆಳಿಗ್ಗೆ ಶ್ರೀಪೂಜೆ, ಪಾದುಕ ಪೂಜೆ ಮತ್ತು ಸೋಪಾನ ಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿಯ ಧಾರ್ಮಿಕ ಕಾರ್ಯಕ್ರಮಗಳು, ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ ಸಮರ್ಪಣೆ ಪಾಂಚಜನ್ಯ ಸೇವೆ,
ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಂಜೆ ಗೋದತ್ತು ದಾನಿಗಳೊಂದಿಗೆ ಸಂವಾದ, ಗೌರವ ಸಮ್ಮಾನ, ಗೋಪೂಜೆ, 1008 ಮಾತೆಯರಿಂದ ಗೋನೀರಾಜನ ಕಾರ್ಯಕ್ರಮ ನಡೆಯಿತು.
ಗೋಲೋಕದ ಗೌರವಾಧ್ಯಕ್ಷ ಜಿ.ವಿ.ಹೆಗಡೆ, ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಸೀತಾರಾಮ್ ಪ್ರಸಾದ್, ಎಸ್.ಆರ್. ಹೆಗಡೆ, ಕೃಷ್ಣಪ್ರಸಾದ್ ಎಡಪಾಡಿ, ಹೊಸನಗರ ಕ್ಷೇತ್ರ ಹೋರಾಟ ಸಮಿತಿಯ ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡ ಎನ್.ಆರ್.ದೇವಾನಂದ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.