ADVERTISEMENT

ಹೌದು, ಸಿದ್ದರಾಮೋತ್ಸವದ ನಂತರ ನಾವು ನಿದ್ದೆ, ಊಟ ಏನೂ ಮಾಡ್ತಿಲ್ಲ- ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 11:47 IST
Last Updated 6 ಆಗಸ್ಟ್ 2022, 11:47 IST
 ಶಾಸಕ ಕೆ.ಎಸ್.ಈಶ್ವರಪ್ಪ
ಶಾಸಕ ಕೆ.ಎಸ್.ಈಶ್ವರಪ್ಪ    

ಶಿವಮೊಗ್ಗ: ‘ಹೌದು, ಸಿದ್ದರಾಮೋತ್ಸವದ ನಂತರ ನಾವು (ಬಿಜೆಪಿ) ಪಾಪ ನಿದ್ದೆ, ಊಟ, ತಿಂಡಿ ಏನೂ ಮಾಡ್ತಿಲ್ಲ. ಹಾಗಂತ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ತೇಲಬೇಡಿ, ಅದರಿಂದ ಹೊರಬನ್ನಿ‘ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‌ ನಾಯಕರಿಗೆ ಟಾಂಗ್ ನೀಡಿದರು.

'ಸಿದ್ಧರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮ ನೋಡಿ ಬಿಜೆಪಿಯವರು ವಿಚಲಿತರಾಗಿದ್ದಾರೆ' ಎಂಬ ಮಾಧ್ಯಮದವರ ಪ್ರಶ್ನೆಗೆ ಶನಿವಾರ ಇಲ್ಲಿ ಮೇಲಿನಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸ್ವಾಮಿ ನಾವು (ಬಿಜೆಪಿ) ಇಂತಹ ಕಾರ್ಯಕ್ರಮ ನೂರು ಮಾಡಿದ್ದೇವೆ. ಇತ್ತೀಚೆಗೊಂದು ಕಾರ್ಯಕ್ರಮ ಮಾಡಿದ ಅವರಿಗೆ (ಕಾಂಗ್ರೆಸ್) ಅದೇ ದೊಡ್ಡದು ಎಂದು ವ್ಯಂಗ್ಯವಾಡಿದರು.

ಅಮೃತ ಮಹೋತ್ಸವದ ಬಗ್ಗೆ ಕಾರ್ಯಕ್ರಮದ ಮುಗಿದ ಬಳಿಕ ಚರ್ಚೆ ಮಾಡೋ ಅವಶ್ಯಕತೆ ಇಲ್ಲ ಎಂದು ಹೇಳಿದ ಅವರು, ‘ರಾಜ್ಯದ ಜನ ಒಳ್ಳೆದಾಗಲಿ ಎಂದು ಶುಭ ಕೋರಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಡಬೇಡಿ. ನೂರು ವರ್ಷ ಬದುಕಿ, ರಾಷ್ಟ್ರಭಕ್ತರಿಗೆ ಬೆಂಬಲ ಕೊಡಿ‘ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ADVERTISEMENT

‘ಕಾರ್ಯಕ್ರಮ ನೋಡಿ ಸಂತೋಷ ಪಡೋರು ಸಂತೋಷ ಪಟ್ಟಿದ್ದಾರೆ. ಹೊಟ್ಟೆ ಉರಿದುಕೊಳ್ಳೋರು ಉರಿದುಕೊಂಡಿದ್ದಾರೆ. ಯಾರು ಎಂದು ನಿಮಗೆ ಗೊತ್ತಲ್ಲಾ, ನಾನು ಹೇಳಲೇ‘ ಎಂದು ಈಶ್ವರಪ್ಪ ಮರು ಪ್ರಶ್ನೆ ಹಾಕಿದರು.

‘ಅಮೃತಮಹೋತ್ಸವ ಒಟ್ಟಾಗಿ ಮಾಡಿದ್ದೇವೆ ಎಂದು ಹೇಳಿಕೊಳ್ಳೋದೆ ಅವರಿಗೆ (ಕಾಂಗ್ರೆಸ್ ನಾಯಕರು) ಸಂತೋಷ. ಒಟ್ಟಾಗಿ ಅನ್ನೋದು ಅವರ ಜೀವನದಲ್ಲಿ ಗೊತ್ತಿಲ್ಲ.ಅವರು ಒಂದಾಗಿ ಇರುವ ಪ್ರಶ್ನೆಯೇ ಇಲ್ಲ. ದಾವಣಗೆರೆ ಕಾರ್ಯಕ್ರಮದ ನಂತರ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಗೊಂದಲ ಜಾಸ್ತಿಯಾಗಿದೆ. ರಾಹುಲ್ ಗಾಂಧಿ ಮುಂದೆ ತೋರಿಸೋಕೆ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಅಪ್ಪಿಕೊಂಡಿದ್ದಾರಷ್ಟೇ. ನಾಯಕರೇ ಮುಂದೆ ನಿಂತು ಸರ್ಕಸ್, ಡ್ಯಾನ್ಸ್ ಮಾಡಿ ಎಂದು ಹೇಳುವ ಸ್ಥಿತಿ ಆ ಪಕ್ಷದವರಿಗೆ ಬಂದಿದೆ‘ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.