ADVERTISEMENT

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಜಪಾನಿನ ಮಿಯಾವಕಿ ಮಾದರಿ ಅರಣ್ಯೀಕರಣ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 12:52 IST
Last Updated 18 ಆಗಸ್ಟ್ 2020, 12:52 IST
ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)
ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)   

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ 40 ಎಕರೆಯಲ್ಲಿ ಸಸಿಗಳನ್ನು ನೆಟ್ಟು, ಜಪಾನಿನ ಮಿಯಾವಕಿ ಅರಣ್ಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಬಹುದಾದ ಸ್ಥಳಗಳನ್ನು ಗುರುತಿಸುವ ಕಾರ್ಯ ಕೈಗೊಳ್ಳಲಾಗಿದೆ. 11 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಗೋಪಾಲ ಗೌಡ ಪಾರ್ಕ್, ಸೋಮಿನಕೊಪ್ಪ, ಶಾರದಮ್ಮ ಲೇಔಟ್ (ಮೈತ್ರಿ ಹಾಸ್ಟೆಲ್ ಹಿಂಭಾಗ), ಎಚ್‍ಟಿ ಲೈನ್ ಕಾರಿಡಾರ್, ದ್ರೌಪದಮ್ಮ ಸರ್ಕಲ್, ವಿನೋಬನಗರ ಪಾರ್ಕ್, ಇಂದಿರಾ ಕ್ಯಾಂಟೀನ್‌, ಸಮುದಾಯ ಭವನ, 60 ಅಡಿ ರಸ್ತೆ (9 ಆರ್‍ಎಂಸಿ ಕಾಪೌಂಡ್), ಎಸ್‍ಟಿಪಿ ತ್ಯಾವರಚಟ್ನಳ್ಳಿ, ವಾಜಪೇಯಿ ಲೇಔಟ್ (ಮೀಸಲು ಅರಣ್ಯ), ರಾಗಿಗುಡ್ಡ ಮತ್ತು ವಿದ್ಯಾನಗರ ಜ್ಞಾನ ವಿಹಾರದಲ್ಲಿ ಭೂಮಿ ಗುರುತಿಸಲಾಗಿದೆ ಎಂದರು.

ADVERTISEMENT

ಮಿಯಾವಕಿ ಮಾದರಿ ಅರಣ್ಯ ಅಭಿವೃದ್ಧಿ: ಜಪಾನಿನ ಮಿಯಾವಕಿ ಮಾದರಿಯಲ್ಲಿ ಅತಿ ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯವನ್ನು ಬಹಳ ಬೇಗನೆ ಬೆಳೆಸಬಹುದಾಗಿದೆ. ಇದರ ಸಾಧ್ಯತೆಯನ್ನು ಪರಿಶೀಲಿಸುವಂತೆ ಅವರು ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಅರಣ್ಯೀಕರಣಕ್ಕೆ ₹3.81 ಕೋಟಿ ನಿಗದಿಪಡಿಸಲಾಗಿದೆ. ಸಸಿ ನೆಡುವುದು ಹಾಗೂ ಐದು ವರ್ಷಗಳ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಕನಿಷ್ಠ 7 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಇದು ಹಸಿರು ಶಿವಮೊಗ್ಗ ನಿರ್ಮಾಣದಲ್ಲಿ ಮಹತ್ವದ ನಿರ್ಧಾರ ಎಂದರು.

ವೈವಿಧ್ಯಮಯ ಸಸಿಗಳ ಆಯ್ಕೆ: ಹೂವಿನ ಮರಗಳು, ಗಿಡಗಳು, ಅರಳಿ, ಬೇವು, ರಂಜಲು, ಬನ್ನಿ, ಬಿಲ್ವಪತ್ರೆ, ಮದ್ದಾಲೆ, ಔಷಧ ಗಿಡಗಳು, ಹತ್ತಿ, ಸಿಹಿ ಹುಣಸೆ, ಹೊಳೆ ಮತ್ತಿ, ತಾರೆ, ಹೆಬ್ಬಿದಿರು, ಕಿರುಬಿದಿರು, ಪೈಕಸ್ ಮರಗಳು, ಮಿಯಾವಕಿ ಮಾದರಿ ಅರಣ್ಯಕ್ಕೆ ಪೂರಕವಾದ ಸಸಿಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.