ADVERTISEMENT

ಖಾತೆಗಾಗಿ ಪಟ್ಟು ಸರಿಯಲ್ಲ: ಶಾಸಕ ಕುಮಾರ್ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 4:49 IST
Last Updated 12 ಆಗಸ್ಟ್ 2021, 4:49 IST
ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ   

ಸಾಗರ: ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವ ಕೆಲವರು ಇಂತಹದ್ದೇ ಖಾತೆ ಬೇಕೆಂದು ಪಟ್ಟುಹಿಡಿದಿರುವ ಕ್ರಮ ಸರಿಯಲ್ಲ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಅರೆಹದ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವರ ಖಾತೆಯಲ್ಲಿ ದೊಡ್ಡದು, ಸಣ್ಣದು ಎಂಬ ಭಾವನೆ ಇರಬಾರದು. ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಕೆಲವರು ಇದು ಮಹತ್ವವಿಲ್ಲದ ಖಾತೆ. ಅದನ್ನು ಯಾಕೆ ಒಪ್ಪಿಕೊಂಡಿರಿ ಎಂದು ಕೇಳಿದ್ದರು. ಈಗ ಈ ಖಾತೆಯೇ ಮಹತ್ವದ್ದಾಗಿದೆ’ ಎಂದರು.

‘ರಾಜ್ಯದಲ್ಲಿ ಈ ಹಿಂದೆ ಬಸವಲಿಂಗಪ್ಪ ಅವರಿಗೆ ಶಿಕ್ಷೆಯ ರೂಪದಲ್ಲಿ ಪರಿಸರ ಖಾತೆಯನ್ನು ನೀಡಲಾಯಿತು. ಅವರು ಈ ಖಾತೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುವ ಮೂಲಕ ಖಾತೆಯ ಪ್ರಾಮುಖ್ಯವನ್ನು ಮನದಟ್ಟು ಮಾಡಿದರು. ಹೀಗೆ ಸಚಿವರಾದವರು ತಮಗೆ ದೊರೆತ ಇಲಾಖೆಯಲ್ಲಿ ಯಾವ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎನ್ನುವ ಬಗ್ಗೆ ಯೋಚಿಸಬೇಕೇ ಹೊರತು ಕೊಟ್ಟ ಖಾತೆಯ ಕುರಿತು ಅಸಮಾಧಾನ ಸೂಚಿಸಬಾರದು’ ಎಂದು
ಹೇಳಿದರು.

ADVERTISEMENT

‘ಶಿವಮೊಗ್ಗ ಜಿಲ್ಲೆಯ ಇಬ್ಬರು ಹಿರಿಯರಿಗೆ ಸಚಿವ ಸ್ಥಾನ ನೀಡಿದ್ದರಿಂದ ನನಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ಯಾವುದೇ ಬೇಸರವಿಲ್ಲ. ಪಕ್ಷದ ಹಿರಿಯರ ತೀರ್ಮಾನವನ್ನು ನಾನು ಗೌರವಿಸುತ್ತೇನೆ. ಮುಂದಿನ 20 ತಿಂಗಳೊಳಗೆ ವಿಧಾನಸಭೆ ಚುನಾವಣೆ ಬರಲಿರುವುದರಿಂದ ಅಲ್ಲಿಯವರೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸುಭದ್ರವಾಗಿರುವಂತೆ ನೋಡಿಕೊಳ್ಳುವುದು ಶಾಸಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.