ADVERTISEMENT

ಕುವೆಂಪು ರಂಗಮಂದಿರ; ಸುಣ್ಣ ಬಣ್ಣ ಕಾಣದೆ ಅತಂತ್ರ

ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಯ ನೆಲೆ

ವೆಂಕಟೇಶ ಜಿ.ಎಚ್.
Published 2 ನವೆಂಬರ್ 2022, 7:21 IST
Last Updated 2 ನವೆಂಬರ್ 2022, 7:21 IST
ಸುಣ್ಣ–ಬಣ್ಣ ಇಲ್ಲದೇ ಕಳೆಗುಂದಿರುವ ಶಿವಮೊಗ್ಗದ ಕುವೆಂಪು ರಂಗಮಂದಿರದ ಹಿಂಭಾಗದ ನೋಟಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಸುಣ್ಣ–ಬಣ್ಣ ಇಲ್ಲದೇ ಕಳೆಗುಂದಿರುವ ಶಿವಮೊಗ್ಗದ ಕುವೆಂಪು ರಂಗಮಂದಿರದ ಹಿಂಭಾಗದ ನೋಟಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಸಿಹಿಮೊಗ್ಗೆಯ ಅಸ್ಮಿತೆ ಇಲ್ಲಿನ ಕುವೆಂಪು ರಂಗ ಮಂದಿರಸುಣ್ಣ,ಬಣ್ಣವಿಲ್ಲದೇ, ಸರಿಯಾದ ನಿರ್ವಹಣೆ ಕಾಣದೇ ಹಾಳು ಸುರಿಯುತ್ತಿದೆ. ಕಟ್ಟಡದಲ್ಲಿ ಆರ್‌ಸಿಸಿ ಇರುವ ಕಡೆ ಮಳೆಗಾಲದಲ್ಲಿ ನೀರಿನ ಹನಿಗಳು ಜಿನುಗುತ್ತವೆ. ದಶಕ ಕಳೆದರೂ ನವೀಕರಣ ಭಾಗ್ಯ ಕಂಡಿಲ್ಲ.

ರಾಷ್ಟ್ರಕವಿ ಕುವೆಂಪು ಹೆಸರಿನ ಈ ರಂಗಮಂದಿರ ಜಿಲ್ಲೆಯ ಹಲವು ಮಹತ್ವದ ಸಂಗತಿಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಸಮಾವೇಶ, ಕಾರ್ಯಕ್ರಮ, ಚಳವಳಿ ಹೀಗೆ ಹಲವು ಚಾರಿತ್ರಿಕ ಸಂಗತಿಗಳಿಗೆ ಸಾಕ್ಷಿಯಾದ ರಂಗಮಂದಿರ ಈಗ ಕುವೆಂಪು ಅವರ ತವರಿನಲ್ಲಿಯೇ ಅನಾದರಕ್ಕೆ ಗುರಿಯಾಗಿದೆ.

ಊರಿನ ಆಸ್ತಿ: 90ರ ದಶಕದಲ್ಲಿ ಊರಿಗೊಂದು ರಂಗಮಂದಿರ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಆಗಿನ ಶಾಸಕರಾದ ಎಂ.ಆನಂದರಾವ್, ಕರಿಯಣ್ಣ, ನಗರಸಭೆ ಅಧ್ಯಕ್ಷ ಎಚ್‌.ಎಂ.ಚಂದ್ರಶೇಖರಪ್ಪ, ಸಚಿವ ಕಾಗೋಡು ತಿಮ್ಮಪ್ಪ ಪ್ರಯತ್ನದ ಫಲವಾಗಿ ಕುವೆಂಪು ರಂಗಮಂದಿರ ನಿರ್ಮಾಣಕ್ಕೆ ಚಾಲನೆ ದೊರಕಿತ್ತು.

ADVERTISEMENT

ನಗರದ ಹೃದಯಭಾಗದಲ್ಲಿ ಮೇನ್‌ ಮಿಡ್ಲ್‌ಸ್ಕೂಲ್‌ಗೆ ಸೇರಿದ್ದ ನಾಲ್ಕೂವರೆ ಎಕರೆ ಜಾಗ ಆಗ ಆಟದ ಮೈದಾನವಾಗಿ ಬಳಕೆ ಆಗುತ್ತಿತ್ತು. ಜೊತೆಗೆ ಒತ್ತುವರಿ ಕೂಡ ಆಗಿತ್ತು. ಅದನ್ನು ಸರ್ವೆ ಮಾಡಿಸಿ ಮತ್ತೆ ಜಿಲ್ಲಾಡಳಿತದ ಸುಪರ್ದಿಗೆ ಪಡೆದು ರಂಗ ಮಂದಿರ ನಿರ್ಮಾಣ ಕಾರ್ಯಕ್ಕೆ ಶ್ರೀಕಾರ ಹಾಕಲಾಗಿತ್ತು.

ದೇಣಿಗೆ ಸಂಗ್ರಹಿಸಿದ್ದರು: ‘ರಂಗಮಂದಿರ ನಿರ್ಮಾಣಕ್ಕೆ ಆರಂಭದಲ್ಲಿ ಯೋಜನಾ ವೆಚ್ಚ ₹25 ಲಕ್ಷ ನಿಗದಿಯಾಗಿತ್ತು. ಅದು ಮುಂದೆ ₹1.25 ಕೋಟಿಗೆ ಹೆಚ್ಚಳಗೊಂಡಿತ್ತು. ವಿಶೇಷವೆಂದರೆ ರಂಗಮಂದಿರ ಕಟ್ಟಡದ ವಿನ್ಯಾಸ ಸ್ಚತಃ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಪುತ್ರ ಮಾಡಿದ್ದರು. ಆರ್ಥಿಕ ಸಂಕಷ್ಟದಿಂದ ಕಟ್ಟಡ ನಿರ್ಮಾಣದ ಕಾಮಗಾರಿ 11 ವರ್ಷ ಬೇಕಾಯಿತು. ಕಟ್ಟಡ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಗ ವರನಟ ಡಾ. ರಾಜಕುಮಾರ್ ಕೂಡ ಸಹಾಯಾರ್ಥ ಕಾರ್ಯಕ್ರಮ ನೀಡಿದ್ದರು. ಕೊನೆಗೆ ಶಿವಾನಂದ ಎ.ಜಾಮದಾರ ಅವರು, ಜಿಲ್ಲಾಧಿಕಾರಿ ಆಗಿದ್ದ ವೇಳೆ ಚಿಕ್ಕಮಗಳೂರಿನಿಂದ ಮರ ತರಿಸಿ ಕಾಮಗಾರಿ ಪೂರ್ಣಗೊಳಿಸಿದ್ದರು’ ಎಂದು ಮಾಜಿ ಶಾಸಕರೂ ಆದ ಎಚ್.ಎಂ.ಚಂದ್ರಶೇಖರಪ್ಪ ನೆನಪಿಸಿಕೊಳ್ಳುತ್ತಾರೆ.

ವಾಸ್ತವವಾಗಿ ರಂಗಮಂದಿರ 1500 ಆಸನಗಳ ಸಾಮರ್ಥ್ಯ ಹೊಂದಿದೆ. ಈಗ 820 ಆಸನಗಳನ್ನು ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇದರ ನಿರ್ವಹಣೆ ಮಾಡುತ್ತಿದ್ದು, ಸರ್ಕಾರಿ ಕಾರ್ಯಕ್ರಮ, ರಾಜಕೀಯ, ಸಂಘ–ಸಂಸ್ಥೆಗಳು, ಸ್ಪರ್ಧೆಗಳು, ಶಾಲಾ–ಕಾಲೇಜುಗಳ ಕಾರ್ಯಕ್ರಮಗಳಿಗೆ ₹2ರಿಂದ ₹15 ಸಾವಿರದವರೆಗೆ ಬಾಡಿಗೆ ನಿಗದಿ ಮಾಡಲಾಗುತ್ತಿದೆ.

***

ಡಿಸೆಂಬರ್‌ ಒಳಗೆ ಶೃಂಗಾರ ಕಾರ್ಯ

ಕುವೆಂಪು ರಂಗಮಂದಿರದ ನವೀಕರಣಕ್ಕೆ ನಿರ್ಮಿತಿ ಕೇಂದ್ರದಿಂದ ₹2.25 ಕೋಟಿ ವೆಚ್ಚದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕೋವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಬಜೆಟ್ ತೊಂದರೆ ಆಗಿ ಅದಕ್ಕೆ ಚಾಲನೆ ಸಿಗಲಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೇಳುತ್ತಾರೆ.

‘ಆಸಕ್ತಿ ವಹಿಸಿ ಸ್ಮಾರ್ಟ್ ಸಿಟಿ ಸಂಸ್ಥೆಯಿಂದ ರಂಗಮಂದಿರದ ಮುಂಭಾಗದ ರಸ್ತೆ ಅಭಿವೃದ್ಧಿಪಡಿಸಿದ್ದೇವೆ. ಮಹಾನಗರ ಪಾಲಿಕೆ ಮೂಲಕ ಕಾಂಪೌಂಡ್ ನಿರ್ಮಿಸಲಾಗಿದೆ. ನಿರ್ಮಿತಿ ಕೇಂದ್ರದಿಂದಲೇ ಕಟ್ಟಡಕ್ಕೆ ಬಣ್ನ ಬಳಿಯುವ ಹಾಗೂ ವಾಟರ್‌ ಪ್ರೂಫಿಂಗ್ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ಡಿಸೆಂಬರ್‌ ಅಂತ್ಯದ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ’
ಎನ್ನುತ್ತಾರೆ.

***

ಬದ್ಧತೆಯ ಕೊರತೆ; ಕಸಾಪ ಬೇಸರ

‘ಕನ್ನಡದ ಬಗ್ಗೆ ಬದ್ಧತೆಗಳ ಕೊರತೆ ಕುವೆಂಪು ರಂಗಮಂದಿರದ ಈ ಸ್ಥಿತಿಗೆ ಕಾರಣ. ಸಮುದಾಯ ಭವನ ಕಟ್ಟಲು, ಇನ್ನಾವುದಕ್ಕೋ ದುಡ್ಡು ಕೊಡುತ್ತಾರೆ. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ಕೆ ಹಣ ಕೊಟ್ಟರೆ ನಮಗೆ ಓಟು ಬರುತ್ತದೆಯೋ ಎಂದು ಜನಪ್ರತಿನಿಧಿಗಳು ಯೋಚಿಸುವುದರಿಂದ ಹೀಗಾಗುತ್ತದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಬೇಸರ ವ್ಯಕ್ತಪಡಿಸುತ್ತಾರೆ.

‘ರಂಗಮಂದಿರ ನಿರ್ವಹಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದು. ಅವರು ಬಾಡಿಗೆ ಪಡೆಯುತ್ತಾರೆ. ಅದರ ಬಾಬ್ತು ಅದಕ್ಕೆ ಖರ್ಚು ಮಾಡಬೇಕು. ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಸ್ಥಾನ ಅದು. ಅದನ್ನು ಕಟ್ಟುವಾಗ ಬಹಳಷ್ಟು ಜನ ಶ್ರಮಪಟ್ಟಿದ್ದಾರೆ. ಹೀಗಾಗಿ ಅದನ್ನು ಸರಿಯಾಗಿ ನಿರ್ವಹಣೆ ಮಾಡಲಿ’ ಎಂದು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.