ADVERTISEMENT

ಕುವೆಂಪು ವಿ.ವಿ: ವಿದ್ಯಾರ್ಥಿಸ್ನೇಹಿ ಇ ಆಡಳಿತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:35 IST
Last Updated 10 ಸೆಪ್ಟೆಂಬರ್ 2020, 2:35 IST
ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ವೆಬ್‌ ಪೋರ್ಟಲ್ ಮತ್ತು ಯುನಿಕ್ಲೇರ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ವೆಬ್‌ ಪೋರ್ಟಲ್ ಮತ್ತು ಯುನಿಕ್ಲೇರ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು.   

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವು ವಿದ್ಯಾರ್ಥಿ ಸಂಬಂಧಿ ಸೇವೆಗಳು ಮತ್ತು ಪರೀಕ್ಷಾ ಚಟುವಟಿಕೆ ನಿರ್ವಹಿಸಲು ಯುನಿಕ್ಲೇರ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‍ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಎಂದು ಕುಲಪತಿ ಬಿ.ಪಿ. ವೀರಭದ್ರಪ್ಪ ಹೇಳಿದರು.

ಪರೀಕ್ಷಾಂಗ ವಿಭಾಗವು ವಿವಿಯ ಬಸವ ಭವನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವೆಬ್‍ ಪೋರ್ಟಲ್ ಮತ್ತು ಯುನಿಕ್ಲೇರ್ ಅಪ್ಲಿಕೇಶನ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಪಾಲುದಾರರಾದ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಂದ ಹಿಡಿದು ಕಟ್ಟಕಡೆಯ ವಿದ್ಯಾರ್ಥಿಯನ್ನು ಒಳಗೊಳ್ಳುವಂತಹ ವ್ಯವಸ್ಥೆಯನ್ನು ಇಲ್ಲಿ ರೂಪಿಸಿದೆ. ವಿವಿಯ ಎಲ್ಲ ಕಾರ್ಯಚಟುವಟಿಕೆ ಮತ್ತಷ್ಟು ವೇಗ, ಸುಲಲಿತ ಮತ್ತು ಪಾರದರ್ಶಕವಾಗಿ ನಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಓಡಾಟದ ಸಮಯ, ಶ್ರಮ ಉಳಿತಾಯವಾಗುತ್ತವೆ ಎಂದರು.

ADVERTISEMENT

ಪರೀಕ್ಷಾಂಗ ಕುಲಸಚಿವ ಪ್ರೊ.ಪಿ. ಕಣ್ಣನ್, ‘ಡಿಜಿಟಲ್ ಸಂವಹನ ಮತ್ತು ಸಂಪರ್ಕಗಳಿಂದಾಗಿ ಜಗತ್ತಿನಾದ್ಯಂತ ಇ-ಆಡಳಿತ ಸಾಮಾನ್ಯವೆಂಬಂತೆ ಚಾಲ್ತಿಗೆ ಬರುತ್ತಿದೆ. ಅದರ ಭಾಗವಾಗಿ ಕರ್ನಾಟಕದಲ್ಲೇ ಮೊದಲ ಪ್ರಯತ್ನವಾಗಿ ಸಂಪೂರ್ಣ ಉಚಿತ ಆನ್‍ಲೈನ್ ಮಾಹಿತಿ ಸೇವೆಯನ್ನು ವಿವಿ ಒದಗಿಸಲು ಮುಂದಾಗಿದೆ. ವಿಶ್ವವಿದ್ಯಾಲಯವು ಪರೀಕ್ಷೆಗಳು ಮತ್ತು ಮೌಲ್ಯಮಾಪನ ಸಂಬಂಧಿ ಉತ್ತರದಾಯಿತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ತೊಟ್ಟಿರುವ ಸಂಕಲ್ಪವನ್ನು ಪ್ರತಿನಿಧಿಸುತ್ತದೆ’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ರಾಮಕೃಷ್ಣ, ಪರೀಕ್ಷಾಂಗ ಉಪಕುಲಸಚಿವ ಡಾ. ಯೋಗೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.