ADVERTISEMENT

ರೈತರ ಸಮಸ್ಯೆ ಬಗೆಹರಿಸಲು ಅನುದಾನದ ಕೊರತೆ

ಬಿ.ಬೀರನಹಳ್ಳಿ ಗ್ರಾ.ಪಂ.ಗೆ ಭೇಟಿ ನೀಡಿದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಧ್ಯಕ್ಷೆ ಕೆ.ಬಿ.ಪವಿತ್ರಾ ರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 4:46 IST
Last Updated 3 ಸೆಪ್ಟೆಂಬರ್ 2022, 4:46 IST
ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಉಂಟಾದ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾ.ಪಂಗೆ ಭೇಟಿ ನೀಡಿದ ಕಾಡಾ ಅಧ್ಯಕ್ಷೆ ಕೆ.ಬಿ.ಪವಿತ್ರ ರಾಮಯ್ಯ, ರೈತರ ಸಮಸ್ಯೆ ಕುರಿತು ಚರ್ಚಿಸಿದರು.
ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಉಂಟಾದ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾ.ಪಂಗೆ ಭೇಟಿ ನೀಡಿದ ಕಾಡಾ ಅಧ್ಯಕ್ಷೆ ಕೆ.ಬಿ.ಪವಿತ್ರ ರಾಮಯ್ಯ, ರೈತರ ಸಮಸ್ಯೆ ಕುರಿತು ಚರ್ಚಿಸಿದರು.   

ಶಿವಮೊಗ್ಗ: ‘ಅಚ್ಚುಕಟ್ಟು ರೈತರ ಸಮಸ್ಯೆ ಬಗೆಹರಿಸಲು ನಮಗೂ ತುಡಿತವಿದೆ. ಆದರೆ, ಅನುದಾನದ ಕೊರತೆ ಕಾಡಾದಲ್ಲಿ ಎದ್ದು ಕಾಣುತ್ತಿದೆ’ ಎಂದುಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಧ್ಯಕ್ಷೆ ಕೆ.ಬಿ.ಪವಿತ್ರಾ ರಾಮಯ್ಯ ಹೇಳಿದರು.

ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಉಂಟಾದ ಕಾರಣ ಶುಕ್ರವಾರ ಭೇಟಿ ನೀಡಿ ರೈತರ ಸಮಸ್ಯೆ ಕುರಿತು ಚರ್ಚಿಸಿ ಅವರು ಮಾತನಾಡಿದರು.

‘ರೈತರು ಭಯಪಡುವ ಅಗತ್ಯ ಇಲ್ಲ. ಸರ್ಕಾರ ರೈತರ ಪರವಾಗಿದ್ದು, ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡು ವಲ್ಲಿ ಶ್ರಮಿಸಲಿದೆ’ ಎಂದು ತಿಳಿಸಿದರು.

ADVERTISEMENT

‘ಎರಡು ವರ್ಷಗಳಿಂದ ಕೋವಿಡ್‌ ಸಂಕಷ್ಟವನ್ನು ಸರ್ಕಾರ ನೀಗಿಸಿಕೊಂಡು ಬಂದಿದೆ. ಇದರ ನಡುವೆಯೇ ರೈತರ ಹಾಗೂ ಸಮಾಜದ ತೊಡಕು ನಿವಾರಿಸಲು ಪಣ ತೊಟ್ಟು, ಸಮಸ್ಯೆಗಳನ್ನೆಲ್ಲ ಹಿಮ್ಮೆಟ್ಟಿಸಿದೆ. ಆ ಮೂಲಕ ಜನಸಾಮಾನ್ಯರ
ಮನಸ್ಸು ಗೆದ್ದು ತೋರಿಸಿದೆ‌’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಅಧಿಕ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ರೈತರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ‘ಬಿ.ಬೀರನಹಳ್ಳಿಯಲ್ಲಿ ಹಾನಿಗೊಳಗಾದ ಪ್ರದೇಶದ ಕಾಮಗಾರಿಯ ಅಂದಾಜು ಮೊತ್ತದ ಕುರಿತು ಮಾಹಿತಿ ನೀಡಿ’ ಎಂದು ಸೂಚಿಸಿದರು.

‘ಭದ್ರಾ ಕಾಡಾ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅನುದಾನ ಬಿಡುಗಡೆ ಮಾಡುವ ಕುರಿತು ಭರವಸೆ ಸಹ ನೀಡಿದ್ದಾರೆ’ ಎಂದು ತಿಳಿಸಿದರು.

ರೈತರ ಸಮಸ್ಯೆ ಕುರಿತು ಚರ್ಚೆಗೂ ಮುನ್ನ, ಬೀರನಹಳ್ಳಿಯ ವಿವಿಧೆಡೆ ರೈತರು ಜಮೀನಿಗೆ ತೆರಳುವ ರಸ್ತೆ, ತೋಟದ ಅಂಚಿನ ತಡೆಗೋಡೆ ಹಾಗೂ ಸೇತುವೆ ಕೊಚ್ಚಿ ಹೋಗಿ ಹಾನಿಗೆ ಒಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್, ನೀರು ಬಳಕೆದಾರ ಸಂಘ ಅಧ್ಯಕ್ಷ ಮಲ್ಲಿಕಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್ ನಾಯ್ಕ್ ಮತ್ತು ಪುರುಷೋತ್ತಮ್, ಬಿ.ಬೀರನಹಳ್ಳಿ ಯುವಕರ ಸಂಘದ ಸದಸ್ಯರಾದ ಸುನೀಲ್, ನಾಗಪ್ಪ, ಗೀರೀಶ್, ಊರಿನ ಗ್ರಾಮಸ್ಥರು ಹಾಗೂ ರೈತ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.