ADVERTISEMENT

ಲಾಕ್‌ಡೌನ್: ಮೊದಲ ದಿನವೇ ಭಾರಿ ಸ್ಪಂದನ

ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಬುದ್ಧಿ ಮಾತು, ಮಾಸ್ಕ್ ಇಲ್ಲದವರಿಗೆ ದಂಡದ ಬಿಸಿ ಮುಟ್ಟಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 5:03 IST
Last Updated 29 ಏಪ್ರಿಲ್ 2021, 5:03 IST
ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಲಾಕ್‌ಡೌನ್ ವೇಳೆ ತಿರುಗಾಡುತ್ತಿದ್ದ ಬೈಕ್ ಸವಾರರನ್ನು ವಿಚಾರಣೆ ನಡೆಸಿದರು.
ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಲಾಕ್‌ಡೌನ್ ವೇಳೆ ತಿರುಗಾಡುತ್ತಿದ್ದ ಬೈಕ್ ಸವಾರರನ್ನು ವಿಚಾರಣೆ ನಡೆಸಿದರು.   

ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ 14 ದಿನಗಳ ಲಾಕ್‌ಡೌನ್‌ಗೆ ಮೊದಲ ದಿನವೇ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ದೊರೆತಿದೆ.

ಮುಂಜಾನೆ 6ರಿಂದ ಅಗತ್ಯ ವಸ್ತುಗಳ ಅಂಗಡಿಗಳ ಬಾಗಿಲು ತೆರೆದಿದ್ದವು. ಜನರು ಸರದಿ ಸಾಲಿನಲ್ಲಿ ನಿಂತು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ನಗರದ ಎಪಿಎಂಸಿ ಮಾರುಕಟ್ಟೆ, ಮಾರ್ಕೆಟ್‌ ರಸ್ತೆ, ವಿನೋಬ ನಗರದ ರಸ್ತೆಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಅಂಗಡಿಗಳ ಎದುರು ಜನದಟ್ಟಣೆ ಕಂಡುಬಂತು.

ಬೆಳಿಗ್ಗೆ 10ರ ಬಳಿಕ ವ್ಯಾಪಾರ– ವಹಿವಾಟು ಸ್ತಬ್ಧಗೊಂಡವು. ಹೂವು, ಹಣ್ಣು ತರಕಾರಿ ಹಾಲು, ಮೀನು– ಮಾಂಸ ಇನ್ನಿತರ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಕೊರೊನಾ ಸೋಂಕು ಲೆಕ್ಕಿಸದೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು.

ADVERTISEMENT

10ರ ನಂತರ ರಸ್ತೆಗಳು ಕ್ರಮೇಣವಾಗಿ ಖಾಲಿಯಾದವು. ರಸ್ತೆಗಳಲ್ಲಿ ವಾಹನ ಸಂಚಾರ ಇರಲಿಲ್ಲ. ಎಲ್ಲೆಡೆ ಪೊಲೀಸರು ಕಾಣುತ್ತಿದ್ದರು. ಅವಧಿ ಪೂರ್ಣಗೊಂಡ ಬಳಿಕವೂ ಅಂಗಡಿ ತೆರೆದು ವ್ಯಾಪಾರ ನಡೆಸಲು ನಿರತರಾಗಿದ್ದ ವರ್ತಕರಿಗೆ ಎಚ್ಚರಿಕೆ ನೀಡಿ, ಬಾಗಿಲು ಹಾಕಿಸಿದರು.

ಮಾಸ್ಕ್ ಹಾಕದವರಿಗೆ ದಂಡದ ಬಿಸಿ: ಕೊರೊನಾ ಮಧ್ಯೆಯೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದ ಕಾರಣ ಬೆಳಿಗ್ಗೆಯೇ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಸ್ಕ್ ಕಾರ್ಯಾಚರಣೆಗೆ ಇಳಿದಿದ್ದರು. ಮಾಸ್ಕ್ ಹಾಕದೆ ತರಕಾರಿ ಖರೀದಿಗೆ ಬಂದಿದ್ದ ಜನರಿಗೆ ಹಾಗೂ ಮಂಡಿ ವರ್ತಕರಿಗೆ ದಂಡದ ಬಿಸಿ ಮುಟ್ಟಿಸಿದರು.

ವರ್ತಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ವರ್ತಕರ ಮಾತುಗಳಿಗೆ ತಕ್ಕ ಉತ್ತರ ನೀಡಿದ ಅಧಿಕಾರಿಗಳು, ‘ದಂಡ ವಿಧಿಸದೆ ಬೇರೆ ದಾರಿ ಇಲ್ಲ. ಎಷ್ಟು ಸಲ ಮಾಸ್ಕ್ ಹಾಕುವಂತೆ ಹೇಳಿದ್ದರೂ ನಿಯಮ ಪಾಲಿಸುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. ಕೆಲವು ವರ್ತಕರು ಮರು ಮಾತಾಡದೇ ದಂಡ ಕಟ್ಟಿದರು.‌

ಕಟ್ಟಡ ಸಾಮಗ್ರಿ ವ್ಯಾಪಾರಸ್ಥರ ಆಗ್ರಹ: ಕಟ್ಟಡ ಸಾಮಗ್ರಿಗಳ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ವ್ಯಾಪಾರಸ್ಥರು ಮನವಿ ಮಾಡಿದರು.

ಸರ್ಕಾರದ ಮಾರ್ಗಸೂಚಿಯನ್ನು ಅಧಿಕಾರಿಗಳು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ ಎಂದು ಸರ್ಕಾರ ಹೇಳಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವ ಕಬ್ಬಿಣ, ಸಿಮೆಂಟ್ ಅಗತ್ಯವಾಗಿದೆ. ಹಾಗಾಗಿ ಸರ್ಕಾರ ತಕ್ಷಣ ಸ್ಪಷ್ಟವಾಗಿ ಮಾರ್ಗಸೂಚಿ ಬಗ್ಗೆ ತಿಳಿಸಬೇಕು. ಕಟ್ಟಡ ಸಾಮಗ್ರಿಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಮಾರ್ಗಸೂಚಿಯಂತೆ ಹೋಟೆಲ್‌ನಲ್ಲಿ ಪಾರ್ಸೆಲ್ ನೀಡಲು ಅವಕಾಶವಿದೆ. ಆದರೂ, ಬಲವಂತವಾಗಿ ಬಾಗಿಲು ಹಾಕಿಸುತ್ತಿದ್ದಾರೆ ಎಂದುಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.