ADVERTISEMENT

ಸಾಗರ: ಸರ್ಕಾರದ ಸಹಾಯವಿಲ್ಲದೆ ಕೆರೆ ಹೂಳೆತ್ತುವ ಕೆಲಸ

ಚಿಲುಮೆಮಠದ ಬ್ರಹ್ಮನ ಕೆರೆ ಅಭಿವೃದ್ಧಿಗೆ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಸಾರಥ್ಯ

ಎಂ.ರಾಘವೇಂದ್ರ
Published 17 ಏಪ್ರಿಲ್ 2024, 6:01 IST
Last Updated 17 ಏಪ್ರಿಲ್ 2024, 6:01 IST
ಸಾಗರ ತಾಲ್ಲೂಕಿನ ಓತಿಗೋಡು ಗ್ರಾಮದಲ್ಲಿ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಚಿಲುಮೆಮಠದ ಬ್ರಹ್ಮನ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ
ಸಾಗರ ತಾಲ್ಲೂಕಿನ ಓತಿಗೋಡು ಗ್ರಾಮದಲ್ಲಿ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಚಿಲುಮೆಮಠದ ಬ್ರಹ್ಮನ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ   

ಸಾಗರ: ಕಳೆದ ಮಳೆಗಾಲದಲ್ಲಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಈ ಕಾರಣಕ್ಕೆ ಫೆಬ್ರುವರಿ ತಿಂಗಳಲ್ಲೇ ಅಪ್ಪಟ ಮಲೆನಾಡಿನ ಈ ಭಾಗದ ಹಳ್ಳಿಗಳಲ್ಲಿ ಜಲಮೂಲಗಳು ಸೊರಗಿವೆ.

ಈ ಪ್ರದೇಶದ ಹಳ್ಳಿಗಳಲ್ಲಿನ ಕೊಳವೆ ಬಾವಿಯ ನೀರು ಸಹ ಕಡಿಮೆಯಾಗಿದ್ದು, ಹಲವೆಡೆ ಹೊಸದಾಗಿ ಕೊಳವೆ ಬಾವಿ ತೋಡಿಸುವ ಸಂಬಂಧ ಬೋರ್‌ವೆಲ್ ಕೊರೆಯುವ ಯಂತ್ರಗಳ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.

ಮಳೆಯ ಕೊರತೆಯಿಂದ ಕೃಷಿಕರಿಗೆ ತಮ್ಮ ಬೆಳೆಯನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಏಪ್ರಿಲ್ ತಿಂಗಳ ಕೊನೆಯ ವಾರದ ಹೊತ್ತಿಗೆ ಕುಡಿಯುವ ನೀರಿಗೂ ತೀವ್ರ ಕೊರತೆ ಉಂಟಾಗುವ ಅಪಾಯ ಎದುರಾಗಿದೆ.

ADVERTISEMENT

ಈ ಸಂದರ್ಭದಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಗ್ರಾಮಸ್ಥರ ನೆರವಿನೊಂದಿಗೆ ಸರ್ಕಾರದ ಸಹಾಯವಿಲ್ಲದೆ ಅಲ್ಲಲ್ಲಿ ಗ್ರಾಮದ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇಲ್ಲಿನ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯು ತಾಲ್ಲೂಕಿನ ಕಸಬಾ ಹೋಬಳಿಯ ಯಲಗಳಲೆ ಗ್ರಾಮದ ಓತಿಗೋಡು ಎಂಬ ಪುಟ್ಟ ಗ್ರಾಮದ ಸ.ನಂ. 37ರಲ್ಲಿರುವ ಚಿಲುಮೆಮಠದ ಬ್ರಹ್ಮನ ಕೆರೆಯ ಕಾಯಕಲ್ಪಕ್ಕೆ ಮುಂದಾಗಿದೆ.

ಈ ಹಿಂದೆ ಚಿಪ್ಪಳಿ ಲಿಂಗದಹಳ್ಳಿಯ ಬಂಗಾರಮ್ಮ, ಆನೆಸೊಂಡಿಲು, ಸುಳ್ಮನೆ ಸಿದ್ದಿವಿನಾಯಕ ಕೆರೆ, ವರದಾಮೂಲದ ಅಗಸ್ತ್ಯ ತೀರ್ಥದ ಹೂಳೆತ್ತುವ ಮೂಲಕ ಜಲಮೂಲ ರಕ್ಷಿಸುವ ಕಾರ್ಯವನ್ನು ಸ್ವಾನ್ ಎಂಡ್ ಮ್ಯಾನ್ ಸಂಸ್ಥೆ ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿ ನಡೆಸಿದೆ.

ಈ ಬಾರಿ ಓತಿಗೋಡು ಗ್ರಾಮದ ಎರಡೂ ಮುಕ್ಕಾಲು ಎಕರೆ ಪ್ರದೇಶದಲ್ಲಿರುವ ಬ್ರಹ್ಮನ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ. ಇಲ್ಲಿನ ಗೌರಿ ಶಿವಾಲಯ ಧಾರ್ಮಿಕ ಕೇಂದ್ರಕ್ಕೂ ಈ ಕೆರೆ ಜಲಮೂಲವಾಗಿದ್ದು ಅಭಿವೃದ್ಧಿ ಕಾಮಗಾರಿ ನಂತರ ಸುತ್ತಮುತ್ತಲ ಪ್ರದೇಶಗಳ ಕೃಷಿಭೂಮಿಗೆ ನೀರುಣಿಸಲು ಕೆರೆಯ ನೀರು ಬಳಕೆಯಾಗುವ ಭರವಸೆ ಹುಟ್ಟಿಸಿದೆ.

‘ಕೆರೆಯ ದಂಡೆಯನ್ನು ಒಡೆದು ಕಟ್ಟೆಯನ್ನು ಭದ್ರಪಡಿಸಿ ಹಿಟಾಚಿ ಯಂತ್ರದ ಮೂಲಕ ಕೆರೆಯ ಹೂಳೆತ್ತುವ ಕೆಲಸ ಕಳೆದ 27 ದಿನಗಳಿಂದ ಸತತವಾಗಿ ನಡೆಯುತ್ತಿದೆ. ಈವರೆಗೆ ಹೂಳೆತ್ತಲು ₹13 ಲಕ್ಷ ಖರ್ಚಾಗಿದ್ದು ಸಾರ್ವಜನಿಕರಿಂದ, ವಿವಿಧ ಸಂಘ ಸಂಸ್ಥೆಗಳಿಂದ ₹7 ಲಕ್ಷ ಸಂಗ್ರಹವಾಗಿದ್ದು, ಇನ್ನೂ 3 ರಿಂದ 4 ಲಕ್ಷ ರೂಪಾಯಿಗಳ ಕೆಲಸ ಬಾಕಿ ಇದೆ’ ಎನ್ನುತ್ತಾರೆ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಪ್ರಮುಖರಾದ ಅಖಿಲೇಶ್ ಚಿಪ್ಪಳಿ.

‘ಮಲೆನಾಡು ಪ್ರದೇಶದಲ್ಲಿ ಕೆರೆಯ ಹೂಳೆತ್ತುವ ಕೆಲಸ ಅತ್ಯಂತ ಸವಾಲಿನದ್ದು. ಕಾಮಗಾರಿ ನಡೆಯುತ್ತಿರುವಾಗ ಮಳೆ ಬಂದರೆ ಕೆಸರಿನಲ್ಲಿ ಹಿಟಾಚಿ, ಟಿಪ್ಪರ್ ಯಂತ್ರ ಹೂತು ಹೋದರೆ ಅವುಗಳನ್ನು ಮೇಲಕ್ಕೆತ್ತುವುದೇ ಸಾಹಸದ ಕೆಲಸವಾಗುತ್ತದೆ. ಮಳೆ ಇಲ್ಲದಿದ್ದರೆ ವಿಪರೀತ ದೂಳಿನಿಂದ ಕೂಡಿದ ಮಣ್ಣಿನ ರಸ್ತೆಯಲ್ಲಿ ಹೂಳು ಸಾಗಿಸುವುದು ಪ್ರಯಾಸದ ಕೆಲಸ’ ಎನ್ನುತ್ತಾರೆ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಭಾಗಿಯಾಗಿರುವ ಕಲ್ಮನೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ವಿ.ಅಕ್ಷರ.

ಹಲವು ಅಡೆತಡೆ, ಅಡ್ಡಿ ಆತಂಕಗಳ ನಡುವೆಯೂ ಓತಿಗೋಡು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಸಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ನೆರವಿಗೆ ಕೋರಿ ಸಲ್ಲಿಸಿದ ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆದಾಗ್ಯೂ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೆರೆಯಲ್ಲಿ ಹೂಳು ಕಂಡುಬಂದಿರುವುದು ಯೋಜನಾ ವೆಚ್ಚವನ್ನು ಹೆಚ್ಚಿಸಿದ್ದು ಮತ್ತಷ್ಟು ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿ ಕಾಮಗಾರಿಯಲ್ಲಿ ಭಾಗಿಯಾಗಿರುವವರು ಇದ್ದಾರೆ.

ರಾಜರ ಆಡಳಿತದ ಕಾಲದಲ್ಲಿ ಹೆಚ್ಚು ಕಡಿಮೆ ಪ್ರತಿಯೊಂದು ಗ್ರಾಮದಲ್ಲೂ ದೇವಸ್ಥಾನ ನಿರ್ಮಿಸಿದಾಗ ಸಮೀಪದಲ್ಲೆ ಕೆರೆ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಜಲಮೂಲಗಳ ಬಗ್ಗೆ ರಾಜರಿಗೆ ಇದ್ದ ಕಾಳಜಿ ನಮ್ಮ ಇಂದಿನ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ಹೊಸದಾಗಿ ಕೆರೆ ನಿರ್ಮಿಸುವ ಮಾತು ಹಾಗಿರಲಿ ಇರುವ ಕೆರೆಗಳನ್ನಾದರೂ ಉಳಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ

–ಅಖಿಲೇಶ್ ಚಿಪ್ಪಳಿ ಪರಿಸರ ಕಾರ್ಯಕರ್ತ

ಓತಿಗೋಡಿನ ಚಿಲುಮೆಮಠದ ಬ್ರಹ್ಮನ ಕೆರೆಯ ಪುನಶ್ಚೇತನ ಕಾಮಗಾರಿ ಭರದಿಂದ ನಡೆದಿದೆ. ಸರ್ಕಾರದ ಸಹಾಯವಿಲ್ಲದೆ ಗ್ರಾಮಸ್ಥರ ನೆರವಿನಿಂದ ಕೆಲಸ ಮುಂದುವರೆದಿದೆ. ಮತ್ತಷ್ಟು ನೆರವು ದೊರಕಿದಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯ

–ಎಲ್.ವಿ.ಅಕ್ಷರ. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ಕೆರೆ ಅಭಿವೃದ್ಧಿಗೆ ನೆರವಿನ ಬ್ಯಾಂಕ್ ಖಾತೆ ವಿವರ ಸ್ವಾನ್ ಎಂಡ್ ಮ್ಯಾನ್. ಇಂಡಿಯನ್ ಬ್ಯಾಂಕ್ ಜೋಗ ರಸ್ತೆ ಸಾಗರ. ಖಾತೆ ಸಂಖ್ಯೆ : 6006590782 ಐಎಫ್ ಸಿ ಕೋಡ್ : IDIB000S003. ಸಂಪರ್ಕ ಸಂಖ್ಯೆ : 9449718869.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.