ADVERTISEMENT

12, 13ಕ್ಕೆ ಸಾಗರದಲ್ಲಿ ಕೆರೆ ಹಬ್ಬ: ಗಣಪತಿ ಕೆರೆ ಅಂಗಳದಲ್ಲಿ ‘ಸಾಗರಾರತಿ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 3:32 IST
Last Updated 10 ಮಾರ್ಚ್ 2022, 3:32 IST
ಮಧುರಾ ಶಿವಾನಂದ್
ಮಧುರಾ ಶಿವಾನಂದ್   

ಸಾಗರ: ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆಯ ದಂಡೆಯ ಮೇಲೆ ಮಾರ್ಚ್ 12 ಹಾಗೂ 13ರಂದು ಕೆರೆ ಹಬ್ಬ ಆಚರಿಸಲಾಗುವುದು ಬುಧವಾರ ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ತಿಳಿಸಿದ್ದಾರೆ.

ಮಾ.12ರಂದು ಬೆಳಿಗ್ಗೆ 6ಕ್ಕೆ ಗಣಪತಿ ಕೆರೆ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಎಚ್.ಹಾಲಪ್ಪ ಹರತಾಳು ಚಾಲನೆ ನೀಡಲಿದ್ದಾರೆ. ಮರುದಿನವೂ ನಡೆಯಲಿರುವ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಾರ್ಚ್12ರ ಸಂಜೆ 6.30ಕ್ಕೆ ಗಣಪತಿ ಕೆರೆಯಲ್ಲಿ ಗಣಪತಿ ವಿಸರ್ಜಿಸುವ ಸ್ಥಳದಲ್ಲಿ ಗಂಗಾರತಿ ಮಾದರಿಯಲ್ಲಿ ‘ಸಾಗರಾರತಿ’ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆರೆ ಎರಡೂ ದಂಡೆಯಲ್ಲಿ ಮಹಿಳೆಯರು ನಿಂತು ಕೆರೆಗೆ ಆರತಿ ಬೆಳಗಲಿದ್ದಾರೆ. ತದನಂತರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಕೆರೆ ಹಬ್ಬದ ಅಂಗವಾಗಿ ಇಂದಿರಾಗಾಂಧಿ ಮಹಿಳಾ ಕಾಲೇಜಿನ ಪಕ್ಕದಲ್ಲಿ ಎರಡು ದಿನಗಳ ಕಾಲವೂ ಆಹಾರ ಮೇಳ ಏರ್ಪಡಿಸಲಾಗಿದೆ. ಸಂಜೆ 6ರಿಂದ ಇಂದಿರಾಗಾಂಧಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಇದೇ ಹೊತ್ತಿನಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಮಾ.12ರಂದು ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಸಂಗೀತ ಸ್ಪರ್ಧೆಯ ವಿಜೇತರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕಲಾವಿದರಿಂದ ವಿವಿಧ ಕಾರ್ಯಕ್ರಮವಿದೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಕೆ.ಆರ್.ಗಣೇಶ್ ಪ್ರಸಾದ್, ಪ್ರೇಮಾ ಕಿರಣ್ ಸಿಂಗ್, ಸತೀಶ್ ಕೆ. ಪ್ರಮುಖರಾದ ಲೋಕನಾಥ ಬಿಳಿಸಿರಿ, ಸಂತೋಷ್ ಕೆ.ಜಿ.ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.