ADVERTISEMENT

ಸಾಗರ | ಮಸೀದಿ ಕಟ್ಟಡ ನವೀಕರಣ ವಿವಾದ: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 20:09 IST
Last Updated 15 ಮಾರ್ಚ್ 2020, 20:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಾಗರ: ಇಲ್ಲಿನ ಗಣಪತಿ ಕೆರೆ ದಂಡೆಯ ಮೇಲಿರುವ ಜಾಮಿಯಾ ಮಸೀದಿ ಕಟ್ಟಡ ನವೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಭಾನುವಾರ ಹಿಂದೂ–ಮುಸ್ಲಿಮರ ನಡುವೆ ಘರ್ಷಣೆ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಒಂದು ಹಂತದಲ್ಲಿ ಎರಡೂ ಗುಂಪುಗಳಲ್ಲಿದ್ದ ಜನರು ಪರಸ್ಪರ ಕೈಕೈ ಮಿಲಾಯಿಸಲು ಮುಂದಾಗಿ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಜಾಮಿಯಾ ಮಸೀದಿ ಕಟ್ಟಡದ ನವೀಕರಣ ಕಾಮಗಾರಿಯನ್ನು ನಿಯಮಗಳನ್ನು ಉಲ್ಲಂಘಿಸಿ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಅಧ್ಯಕ್ಷತೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಭೆಯನ್ನು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ADVERTISEMENT

ಕಚೇರಿಯಲ್ಲಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಅತ್ತ ಮಸೀದಿಯ ಎದುರು ಎರಡೂ ಸಮುದಾಯದವರು ಸೇರಿದ್ದರು. ಮಸೀದಿ ಹಾಗೂ ಗಣಪತಿ ದೇವಸ್ಥಾನದ ನಡುವೆ ಇರುವ ಚರಂಡಿಯನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ ಒಂದು ಗುಂಪಿನ ಜನರು ಚರಂಡಿಯಲ್ಲಿದ್ದ ಮಣ್ಣನ್ನು ತೆಗೆಯಲು ಮುಂದಾದರು. ಇದನ್ನು ಮತ್ತೊಂದು ಗುಂಪಿನವರು ವಿರೋಧಿಸಿದರು.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾತುಕತೆಯಲ್ಲಿ ಪಾಲ್ಗೊಂಡವರು ಸ್ಥಳಕ್ಕೆ ಆಗಮಿಸಿ ಒಪ್ಪಂದದ ಬಗ್ಗೆ ವಿವರಿಸಲು ಮುಂದಾದಾಗಒಂದು ಗುಂಪಿನವರು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ ಮತ್ತೊಂದು ಗುಂಪು ಪ್ರತಿಯಾಗಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತ ದೇಶದ್ರೋಹಿಗಳನ್ನು ಬಂಧಿಸಿ ಎಂದು ಆಗ್ರಹಿಸಿತು. ಈ ನಡುವೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.