ADVERTISEMENT

ದೇಶಪ್ರೇಮ ಮನೆಮನಕ್ಕೆ ವ್ಯಾಪಿಸಲಿ: ಕರಂದ್ಲಾಜೆ

‘ಕುವೆಂಪು ವಿಶ್ವವಿದ್ಯಾಲಯದ ನಡಿಗೆ ಈಸೂರು ಕಡೆಗೆ’ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:48 IST
Last Updated 15 ಆಗಸ್ಟ್ 2022, 4:48 IST
ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಭಾನುವಾರ ಕುವೆಂಪು ವಿಶ್ವವಿದ್ಯಾಲಯದ ನಡಿಗೆ ಈಸೂರು ಕಡೆಗೆ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು
ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಭಾನುವಾರ ಕುವೆಂಪು ವಿಶ್ವವಿದ್ಯಾಲಯದ ನಡಿಗೆ ಈಸೂರು ಕಡೆಗೆ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು   

ಈಸೂರು (ಶಿವಮೊಗ್ಗ): ಮನೆಮನೆಯಲ್ಲೂ ತಿರಂಗ ಕಾರ್ಯಕ್ರಮ ದೇಶಪ್ರೇಮ ಬಡಿದೆಬ್ಬಿಸುತ್ತಿದೆ. ಭಾರತಿಯರೆಲ್ಲರ ಮನೆಮನದಲ್ಲೂ ತಿರಂಗಾ ಮೂಲಕ ದೇಶಪ್ರೇಮ ಕಾಣುತ್ತಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿಕುವೆಂಪು ವಿಶ್ವವಿದ್ಯಾಲಯ ಭಾನುವಾರ ಆಯೋಜಿಸಿದ್ದ ಈಸೂರು ಕಡೆಗೆ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರತಿ ಮನೆ, ಅಂಗಡಿ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಕಟ್ಟಡಗಳಲ್ಲಿ ಅಗಾಧ ಪ್ರಮಾಣದ ತಿರಂಗಾಗಳನ್ನು ಹಾರಿಸುವ ಮೂಲಕ ನಮ್ಮ ಮನೆ ಮನಗಳಲ್ಲಿ ದೇಶ ಪ್ರೇಮ ಇಳಿಯಬೇಕು ಎಂದರು.

’ಭಾರತದಲ್ಲಿನ ಆಯುರ್ವೇದ, ಯೋಗ, ಖಗೋಳಜ್ಞಾನ, ಗಣಿತಶಾಸ್ತ್ರಗಳನ್ನು ಕಲಿಯಲು ಈ ಹಿಂದೆ ವಿದೇಶಗಳಿಂದ ಆಸಕ್ತರು ಬರುತ್ತಿದ್ದರು. ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ತಲುಪುವ ವೇಳೆಗೆ ವಿದ್ಯಾರ್ಥಿಗಳಾದ ನೀವೆಲ್ಲರೂ ಶ್ರೇಷ್ಠ, ವಿಶ್ವಗುರು ಭಾರತ ನಿರ್ಮಿಸಲು ಶ್ರಮಿಸಬೇಕು. ಅಂದು ಹೆಮ್ಮೆಯಿಂದ ಸ್ವಾತಂತ್ರ ಹೋರಾಟಗಳನ್ನು ನೆನೆಯಬೇಕು’ ಎಂದರು.

ADVERTISEMENT

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಹರ್ ಘರ್ ತಿರಂಗಾ, ಅಮೃತ ಮಹೋತ್ಸವದಂತಹ ಕೇಂದ್ರದ ಕಾರ್ಯಕ್ರಮವು ಯುವಜನರಲ್ಲಿ ಸ್ವಾತಂತ್ರ ಹೋರಾಟದ ಬಗ್ಗೆ ಅರಿವು ಹಾಗೂ ದೇಶ ಪ್ರೇಮ ಪ್ರೇರೇಪಿಸುವಲ್ಲಿ ಅತ್ಯಂತ ಅವಶ್ಯಕ ಕಾರ್ಯಕ್ರಮವಾಗಿವೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ 100ಕ್ಕೂ ಹೆಚ್ಚು ಐತಿಹಾಸಿಕ ಸ್ವಾತಂತ್ರ ಹೋರಾಟದ ಗ್ರಾಮಗಳು, ಸ್ಥಳಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಆ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಲು ಪ್ರಧಾನಿ ತಿಳಿಸಿದ್ದಾರೆ. ಅದರ ಭಾಗವಾಗಿ ಈಸೂರು ಗ್ರಾಮದಲ್ಲಿ ₹4.95 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ, ರಂಗಮಂದಿರ, ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಈ ಮೂಲಕ ಸ್ಮಾರಕವು ಐತಿಹಾಸಿಕ ಸ್ಮಾರಕಗಳ ಪಟ್ಟಿಯಲ್ಲಿ ಸೇರುವುದಲ್ಲದೇ ಸ್ವಾತಂತ್ರ್ಯ ಪಡೆಯುವ ಸಲುವಾಗಿ ಪ್ರಾಣ ಬಲಿದಾನಕ್ಕೆ ಒಳಗಾದ ಈಸೂರಿನ ವೀರರ ಶೌರ್ಯ ಜಗತ್ತಿಗೆ ಸಾರಲಾಗುತ್ತದೆ ಎಂದರು.

ವಿಶ್ವವಿದ್ಯಾಲಯದ ಕುಲಸಚಿವೆ ಜಿ.ಅನುರಾಧ ಸ್ವಾಗತಿಸಿದರು. ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಯಿಂದ 400ಕ್ಕೂ ಅಧಿಕ ವಿದ್ಯಾರ್ಥಿಗಳು, ಸಿಬ್ಬಂದಿ ಕಾರ್ಯಕ್ರಮಕ್ಕೆ ಬಂದಿದ್ದು , ಸ್ಮಾರಕದ ಬಳಿಯಿಂದ ಗ್ರಾಮದಲ್ಲಿ ಜಾಥಾ ನಡೆಸಲಾಯಿತು.

ಶಾಸಕ ಹರತಾಳು ಹಾಲಪ್ಪ ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ, ಡಿ.ಎಸ್.ಅರುಣ್, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಇದ್ದರು.

***

ಹುತಾತ್ಮರ ಕುಟುಂಬದವರಿಗೆ ಸನ್ಮಾನ

ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಗಲ್ಲಿಗೇರಿದ ವೀರರಾದ ಗುರಪ್ಪ ಕಮ್ಮಾರ್, ಜಿನಹಳ್ಳಿ ಮಲ್ಲಪ್ಪ, ಸೂರ್ಯನಾರಾಯಣ ಆಚಾರ್, ಬಡಕಳ್ಳಿ ಹಾಲಪ್ಪ, ಗೌಡ್ರು ಶಂಕರಪ್ಪ ಅವರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ನಿವೃತ್ತ ಸೈನಿಕರು, ಈಸೂರು ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.