ADVERTISEMENT

ಶಿವಮೊಗ್ಗ ಕೋವಿಡ್ ಕೇಂದ್ರದಲ್ಲಿ ಗ್ರಂಥಾಲಯ: ನಾಳೆ ಉದ್ಘಾಟನೆ

ಮ.ಸ. ನಂಜುಂಡಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 3:38 IST
Last Updated 8 ಅಕ್ಟೋಬರ್ 2020, 3:38 IST

ಶಿವಮೊಗ್ಗ: ಪ್ರಥಮ ಬಾರಿಗೆ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ ಪ್ರಾರಂಭಿಸಲಾಗುತ್ತಿದೆ ಎಂದುಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ ಹೇಳಿದರು.

ಸಾಗರದ ಕೋವಿಡ್ ಆಸ್ಪತ್ರೆಯಲ್ಲಿ ಮೊದಲು ಗ್ರಂಥಾಲಯದ ಪ್ರಯೋಗ ಮಾಡಲಾಯಿತು. ಇದರಿಂದ ರೋಗಿಗಳಿಗೆ ಅನುಕೂಲವಾಗುತ್ತಿರುವುದರಿಂದ ಜಿಲ್ಲಾ ಕೇಂದ್ರಕ್ಕೂ ಅದನ್ನು ವಿಸ್ತರಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಸೋಂಕಿತರಲ್ಲಿ ಆತಂಕ, ಏಕಾಂಗಿತನವನ್ನು ದೂರ ಮಾಡಿ ಮಾನಸಿಕವಾಗಿ ಸದೃಢರಾಗಿರಲು ಸಹಕಾರಿಯಾಗಲೆಂದು ಈ ಗ್ರಂಥಾಲಯ ಪ್ರಾರಂಭಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಿಮ್ಸ್ ವೈದ್ಯಾಧಿಕಾರಿಗಳು, ಮೆಗ್ಗಾನ್‍ನ ವೈದ್ಯಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ಸಹಕಾರದೊಂದಿಗೆ ಗ್ರಂಥಾಲಯ ಸ್ಥಾಪಿಸಲಾಗುತ್ತಿದೆ ಎಂದರು.

ADVERTISEMENT

ಇದಕ್ಕೆ ಸರ್ಕಾರದ ಯಾವುದೇ ಅನುದಾನವಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಂಘದ ಪದಾಧಿಕಾರಿಗಳು ಹಾಗೂ ದಾನಿಗಳು, ಸಾಹಿತಿಗಳು ನೀಡಿದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡಲಾಗುತ್ತಿದೆ. ಆಸಕ್ತರು ಗುಣಮಟ್ಟದ ಗ್ರಂಥಗಳನ್ನು ಕೊಡುಗೆಯಾಗಿ ನೀಡಬಹುದು. ಪುಸ್ತಕ ದಾನ ನೀಡುವವರು 88611 69056ಗೆ ಕರೆ ಮಾಡಿ ಪುಸ್ತಕವನ್ನು ನೀಡಬಹುದು ಎಂದು ತಿಳಿಸಿದರು.

ನಾಳೆ ಗ್ರಂಥಾಲಯ ಉದ್ಘಾಟನೆ:ಅ.9ರಂದು ಬೆಳಿಗ್ಗೆ 11ಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದರು.

ತಾರತಮ್ಯ ಹೋಗಲಾಡಿಸಿ: ಕೆಲವು ಹುದ್ದೆಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇಲಾಖೆಯ ನೌಕರರಲ್ಲೇ ತಾರತಮ್ಯ ಮಾಡಿದಂತಾಗುತ್ತಿದೆ. ಇದರಿಂದ ನೌಕರರಲ್ಲಿ ಅಸಮಾಧಾನ ಉಂಟಾಗಿದೆ. ಎಲ್ಲರಿಗೂ ಪ್ರೋತ್ಸಾಹಧನ ನೀಡಿ ತಾರತಮ್ಯ ಹೋಗಲಾಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಗುಡದಪ್ಪ ಕಸಬಿ, ಕಾರ್ಯಾಧ್ಯಕ್ಷ ವಿ.ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಕೆ.ನರಸಿಂಹ, ಐ.ಪಿ. ಶಾಂತರಾಜ್, ಎಂ.ಎಸ್. ಗಿರೀಶ್, ವಿ. ಸತ್ಯನ್‍ದೇವನ್, ವೈ.ಜೆ. ಶಶಿಕುಮಾರ್, ಚಂದ್ರಮತಿ ಹೆಗಡೆ, ಪಿ.ಇ. ಬಸವರಾಜಪ್ಪ, ಪ್ರತಿಮಾ ಡಾಕಪ್ಪ, ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.