ADVERTISEMENT

ಹೊಸನಗರ: ಕೊಡಚಾದ್ರಿ ಅತಿಥಿ ಗೃಹಕ್ಕೆ ಬೀಗ; ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 3:07 IST
Last Updated 30 ನವೆಂಬರ್ 2020, 3:07 IST

ಹೊಸನಗರ: ಕೊಡಚಾದ್ರಿ ಬೆಟ್ಟದ ಮೇಲ್ಭಾಗದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರಕ್ಕೆ ವನ್ಯಜೀವಿ ಇಲಾಖೆ ಬೀಗ ಹಾಕಿದ ಪ್ರಕರಣ ಸಂಬಂಧ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ.

ಪ್ರವಾಸಿ ಮಂದಿರದಲ್ಲಿ ಅನುಮತಿ ಪಡೆಯದೆ ಕೆಲವರು ತಂಗಿದ್ದಾರೆ ಎಂಬ ಕಾರಣಕ್ಕೆ ವನ್ಯಜೀವಿ ಇಲಾಖೆ ಅಧಿಕಾರಿಗಳು ನ.27 ರಂದು ಪ್ರವಾಸಿ ಮಂದಿರಕ್ಕೆ ಬೀಗ ಹಾಕಿದ್ದರು. ಬಳಿಕ ನ.28ರಂದು ಬೀಗ ತೆರೆದಿದ್ದರು.

ಲೋಕೋಪಯೋಗಿ ಇಲಾಖೆಗೆ ಸೇರಿದ ‍ಪ್ರವಾಸಿ ಮಂದಿರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೀಗ ಹಾಕಿದ್ದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ADVERTISEMENT

‘ನ.26 ರಂದು ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ತಂಗಿದ್ದವರಲ್ಲಿ ಹಣ ಪಾವತಿಸಿದ ರಸೀತಿ ಕೇಳಿದ್ದಾರೆ. ಅವರು ರಸೀತಿಯನ್ನೂ ನೀಡಿದ್ದರು. ಆದರೆ ಇದೇ ಕಾರಣವಿಟ್ಟು ಮತ್ತೆ ನಾನು ಇಲ್ಲದ ಸಂದರ್ಭದಲ್ಲಿ ಬಂದು ಪ್ರವಾಸಿ ಮಂದಿರಕ್ಕೆ ಬೀಗ ಹಾಕಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಎಇಇಗೆ ಮಾಹಿತಿ ನೀಡಿದ್ದೆ. ನ.28 ರಂದು ವನ್ಯಜೀವಿ ಇಲಾಖೆಯವರು ಬೀಗ ತೆಗೆದಿದ್ದಾರೆ’ ಎಂದು ಪ್ರವಾಸಿ ಮಂದಿರದ ಮೇಟಿ ಶ್ರೀಧರಶೆಟ್ಟಿ ದೂರಿದರು.

‘ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರಕ್ಕೆ ಬಂದು ಅಧಿಕಾರ ಚಲಾಯಿಸುವುದು ಎಷ್ಟು ಸರಿ. ಪ್ರವಾಸಿಮಂದಿರದಲ್ಲಿ ಇದ್ದವರಿಗೆ ತೊಂದರೆಯಾದರೆ ನಾನು ಹೊಣೆ ಹೊರಬೇಕಾಗುತ್ತದೆ’ ಎನ್ನುತ್ತಾರೆ ಅವರು.

ಕೊಡಚಾದ್ರಿ ಗಿರಿ ಸಂರಕ್ಷಣೆ ಸಂಬಂಧ ವನ್ಯಜೀವಿ ಇಲಾಖೆ ಕ್ರಮಗಳ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

‘ಗಿರಿಗೆ ಹಾನಿಯಾಗುವ ಮೋಜು‌ಮಸ್ತಿ, ಬೇರೆ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಿ. ಆದರೆ ತಮ್ಮ ವ್ಯಾಪ್ತಿಗೆ ಬರದ ಪ್ರವಾಸಿ ಮಂದಿರಕ್ಕೆ ಬೀಗ ಹಾಕುವುದು ಸರಿಯಲ್ಲ. ಅಲ್ಲದೆ ಸರ್ವಜ್ಞ ಪೀಠ ಮತ್ತು ಗಣಪತಿ ಗುಹೆಗೆ ತೆರಳುವ ಮಾರ್ಗದಲ್ಲಿ ಬೇಲಿ ಹಾಕಿ‌ ನಿರ್ಬಂಧ ಹಾಕಲಾಗುತ್ತದೆ. ಇದು ಸರಿಯಲ್ಲ’ ಎಂದು ಪ್ರಮುಖರಾದ ರಾಜೇಂದ್ರ ಶೆಟ್ಟಿ ಹೇಳಿದರು.

ಈ ಬಗ್ಗೆ ಸ್ಷಷ್ಟನೆ ಪಡೆಯಲು ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.