ADVERTISEMENT

ಶಿವಮೊಗ್ಗ | ಹಣ, ಸಮಯ ಉಳಿತಾಯ ರಾಜಿಸಂಧಾನದ ಧ್ಯೇಯ

ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶ ಮುಸ್ತಾಫಾ ಹುಸೇನ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 5:58 IST
Last Updated 26 ಜೂನ್ 2022, 5:58 IST
ಶಿವಮೊಗ್ಗದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಾಫಾ ಹುಸೇನ್ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.
ಶಿವಮೊಗ್ಗದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಾಫಾ ಹುಸೇನ್ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.   

ಶಿವಮೊಗ್ಗ: ಲೋಕ ಅದಾಲತ್‌ನಿಂದ ಕಕ್ಷಿದಾರರಿಗೆ ಸಾಕಷ್ಟು ಅನುಕೂಲಗಳಿವೆ. ರಾಜಿಸಂಧಾನದ ಮೂಲಕವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದರಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ ಎಂದು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಾಫಾ ಹುಸೇನ್ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಲೋಕ ಅದಾಲತ್‌ನಲ್ಲಿ ರಾಜಿಸಂಧಾನದ ಮೂಲಕ 10,070 ಪ್ರಕರಣಗಳ ವಿಲೇವಾರಿ ಮಾಡಲಾಗುತ್ತಿದೆ. ಇನ್ನೂ ಹೆಚ್ಚು ಪ್ರಕರಣ ವಿಲೇವಾರಿಯಾಗುವ ಸಾಧ್ಯತೆ ಇದೆ. ಶಿವಮೊಗ್ಗ–ತೀರ್ಥಹಳ್ಳಿ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಶರತ್ ಎಂಬ ಯುವಕನ ಕುಟುಂಬಕ್ಕೆ ₹28 ಲಕ್ಷ ಪರಿಹಾರದ ಚೆಕ್ ನೀಡುತ್ತಿದ್ದೇವೆ. 2021ರ ಫೆಬ್ರುವರಿ 20ರಂದು ನಡೆದ ಈ ಅಪಘಾತ ಪ್ರಕರಣಕ್ಕೆ ಲೋಕ ಅದಾಲತ್‌ನಲ್ಲಿ 1 ತಿಂಗಳೊಳಗೆ ರಾಜಿಸಂಧಾನದ ಮೂಲಕ ಪರಿಹಾರ ಸಿಕ್ಕಿದೆ. ಇದರಿಂದ ಕುಟುಂಬಕ್ಕೂ ಅನುಕೂಲವಾಗಿದೆ. ಕಡಿಮೆ ಅವಧಿಯಲ್ಲಿ ತೀರ್ಮಾನವಾಗುವುದು ಅದಾಲತ್ ವಿಶೇಷತೆ’ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಚೆಕ್‌‌ಬೌನ್ಸ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಇಂದಿನ ಅದಾಲತ್‌ನಲ್ಲಿ 175 ಪ್ರಕರಣಗಳ ಇತ್ಯರ್ಥವಾಗಿದೆ.ಇದರಿಂದ ಎರಡೂ ಕಡೆಯವರಿಗೆ ಮಾನಸಿಕ, ಆರ್ಥಿಕ ಕಿರಿಕಿರಿ ಇಲ್ಲ.ಅಲ್ಲದೇ, ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಸಂಧಾನ ಮಾಡಿಸಿ ದಂಪತಿಯನ್ನು ಒಂದಾಗಿಸುವ ಪ್ರಕ್ರಿಯೆ ನಡೆದಿವೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಶಿವಮೂರ್ತಿ, ‘4 -5 ವರ್ಷಗಳು ನ್ಯಾಯಾಲಯಕ್ಕೆ ಓಡಾಡುವ ಪ್ರಕರಣಗಳು ಅದಾಲತ್‌ನಲ್ಲಿ ತೀರ್ಮಾನ ಆಗಿವೆ. ಪ್ರಕರಣಗಳನ್ನು ಇಲ್ಲಿ ಇತ್ಯರ್ಥಪಡಿಸಿಕೊಳ್ಳುವುದರಿಂದ ವಕೀಲರಿಗೂ ಶುಲ್ಕ ನೀಡುವ ಅಗತ್ಯ ಇಲ್ಲ. ಕಕ್ಷಿದಾರರಿಗೆ ಹೆಚ್ಚಿನ ಅನುಕೂಲ ಸಿಗಲಿದೆ’ ಎಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.