ADVERTISEMENT

ಸಾರ್ವಜನಿಕರ ನಿದ್ದೆಗೆಡಿಸಿದ ನಾಯಿಗಳು

ವೆಂಕಟೇಶ ಜಿ.ಎಚ್.
Published 5 ಡಿಸೆಂಬರ್ 2022, 4:28 IST
Last Updated 5 ಡಿಸೆಂಬರ್ 2022, 4:28 IST
ಹೊಸನಗರದಲ್ಲಿ ರಸ್ತೆ ಪಕ್ಕ ನಾಯಿಗಳ ಹಿಂಡು.
ಹೊಸನಗರದಲ್ಲಿ ರಸ್ತೆ ಪಕ್ಕ ನಾಯಿಗಳ ಹಿಂಡು.   

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬೀದಿ ನಾಯಿಗಳ ಸದ್ದು ಪುಟ್ಟ ಮಕ್ಕಳು ಹಾಗೂ ಪಾಲಕರ ನಿದ್ದೆ ಕೆಡಿಸಿದೆ. ಭದ್ರಾವತಿ ತಾಲ್ಲೂಕಿನ ದುಡುಮಘಟ್ಟದಲ್ಲಿ ನಾಲ್ಕು ವರ್ಷದ ಬಾಲಕನನ್ನು ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿದ ಮರು ದಿನವೇ ಶಿವಮೊಗ್ಗದ ಪುರಲೆಯಲ್ಲಿ ನಾಲ್ಕು ವರ್ಷದ ಬಾಲಕಿಗೆ ನಾಯಿ ಕಚ್ಚಿದೆ. ಶ್ವಾನಗಳ ಹಾವಳಿಗೆ ಜನರು ತತ್ತರಿಸಿದ್ದಾರೆ.

ನಗರ, ಪಟ್ಟಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಕೋಳಿ ಹಾಗೂ ಇತರೆ ಮಾಂಸ ಮಾರಾಟದ ನಂತರ ಉಳಿಯುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದು ಬೀದಿ ನಾಯಿಗಳಿಗೆ ಹಸಿ ಮಾಂಸದ ರುಚಿ ಹತ್ತಿಸುತ್ತಿದೆ. ಜೊತೆಗೆ ಸುಲಭವಾಗಿ ಆಹಾರ ಸಿಗುವುದರಿಂದ ಅವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಚಳಿಗಾಲದಲ್ಲಿ ನಾಯಿಗಳು ಸೂಕ್ಷ್ಮವಾಗುವ ಜೊತೆಗೆ ಆಕ್ರಮಣಕಾರಿಯಾಗಿಯೂ ವರ್ತಿಸುತ್ತವೆ. ಇದು ಪುಟ್ಟ ಮಕ್ಕಳ ಜೀವಕ್ಕೆ ಕುತ್ತಾಗುತ್ತಿದೆ.

ಬೀದಿ ನಾಯಿಗಳ ಹಿಂಡು ಒಂದು ಕಡೆ ಠಳಾಯಿಸಿ ದಿಢೀರನೆ ಬೈಕ್ ಸವಾರರ ಇಲ್ಲವೇ ಪಾದಚಾರಿಗಳ ಬೆನ್ನಟ್ಟುತ್ತವೆ. ಕೆಲವೊಮ್ಮೆ ನಾಯಿಗಳ ಹಿಂಡಿನ ಜಗಳ ದಾರಿ ಹೋಕರಿಗೆ ಕಡಿತದ ಮೂಲಕ ಕೊನೆಗೊಳ್ಳುತ್ತಿದೆ. ಹೆಣ್ಣು–ಗಂಡು ನಾಯಿಗಳ ಹಿಂಡು ಇಡೀ ರಸ್ತೆ, ಫುಟ್‌ಪಾತ್‌ ಆಕ್ರಮಿಸಿಕೊಳ್ಳುವುದರಿಂದ ಹಲವು ಬಾರಿ ಅಪಘಾತಗಳೂ ಸಂಭವಿದಿವೆ.

ADVERTISEMENT

14,554 ಮಂದಿಗೆ ನಾಯಿ ಕಡಿತ: ಕಳೆದ 10 ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 14,554 ಮಂದಿಗೆ ನಾಯಿ ಕಡಿದಿವೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ಹೇಳುತ್ತದೆ. ಅದರಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ 4,145, ಭದ್ರಾವತಿ 3,009, ಸಾಗರ 2,595, ಶಿಕಾರಿಪುರ 1,736, ತೀರ್ಥಹಳ್ಳಿ 1,410, ಸೊರಬ 1,256 ಹಾಗೂ ಹೊನಗರ ತಾಲ್ಲೂಕಿನಲ್ಲಿ 1,659 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಗೆ ನಾಯಿ ಹಾವಳಿ ಬಗ್ಗೆ ನಿತ್ಯ ಕನಿಷ್ಠ 10 ಕರೆಗಳು ಬರುತ್ತವೆ. ಪಾಲಿಕೆ ವ್ಯಾಪ್ತಿಯಲ್ಲಿ 2018ರಿಂದ 2021ರವರೆಗೆ 2,850 ಬೀದಿ ನಾಯಿಗಳನ್ನು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. 2022–23ನೇ ಸಾಲಿನಲ್ಲಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ₹ 20 ಲಕ್ಷ ತೆಗೆದಿಡಲಾಗಿದೆ. ಶಸ್ತ್ರಚಿಕಿತ್ಸೆಗೆ ಪ್ರತಿ ನಾಯಿಗೆ ₹ 1,227 ಖರ್ಚು ಆಗುತ್ತಿದ್ದು, ಪಾಲಿಕೆಯಲ್ಲಿ ಮೀಸಲಿಟ್ಟಿರುವ ಹಣ ಯಾವುದಕ್ಕೂ ಸಾಲುವುದಿಲ್ಲ ಎಂದು ಹೇಳಲಾಗಿದೆ.

‘ನಾಯಿ ಕಡಿತಕ್ಕೆ ಚುಚ್ಚುಮದ್ದು; ನಿರ್ಲಕ್ಷ್ಯ ಬೇಡ’: ಪೇಟೆಗಿಂತ ಹಳ್ಳಿಗಳಲ್ಲಿಯೇ ನಾಯಿ ಕಡಿತ ಪ್ರಕರಣಗಳು ಹೆಚ್ಚು. ಹೀಗಾಗಿ ಹಳ್ಳಿಗರು
ನಾಯಿ ಕಡಿದ ತಕ್ಷಣ ಸುಣ್ಣ ಹಚ್ಚುವುದು, ಇನ್ನೇನೋ ನಾಟಿ ಔಷಧ ಬಳಕೆ ಮಾಡುವುದು ಬಿಟ್ಟು, ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ತಾಲ್ಲೂಕಿನ
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಚುಚ್ಚುಮದ್ದು ಲಭ್ಯವಿದೆ ಎಂದು ಹೊಸನಗರ ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಸುರೇಶ್ ತಿಳಿಸಿದ್ದಾರೆ.

‘ನಾಯಿ ಕಡಿತಕ್ಕೆ ಒಳಗಾದವರು ನಾಲ್ಕು ಬಾರಿ ಲಸಿಕೆ ಹಾಕಿಸಿಕೊಳ್ಳಬೇಕು. ನಾಯಿ ಕಚ್ಚಿದ ದಿನ, ನಂತರ ಮೂರು ದಿನಕ್ಕೆ, ಏಳನೇ ದಿನಕ್ಕೆ, 28ನೇ ದಿನಕ್ಕೆ ಲಸಿಕೆ ಹಾಕಿಸಿಕೊಳ್ಳಬೆಕು‘ ಎಂದು ಶಿಕಾರಿಪುರದಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿಡಾ.ಶಿವಾನಂದ್ ವಿವರಿಸಿದ್ದಾರೆ.

ಬೀದಿ ನಾಯಿ ಹಾವಳಿ ಜೋರು

ಹೊಸನಗರ: ಹೊಸನಗರ ಸೇರಿ ತಾಲ್ಲೂಕಿನ ವಿವಿಧೆಡೆ ಬೀದಿನಾಯಿಗಳ ಉಪಟಳ ಜೋರಾಗೇ ಇದೆ. ಹೊಸನಗರ, ರಿಪ್ಪನ್‍ಪೇಟೆ, ನಗರ, ಹುಂಚಾ ಮತ್ತಿತರ ಕಡೆ ಬೀದಿ ನಾಯಿಗಳು ಇಲ್ಲಿನ ದಾರಿಹೋಕರಿಗೆ ಅಪಾಯ ತಂದೊಡ್ಡುತ್ತಿವೆ.

ಹೊಸನಗರ ಬಸ್‍ನಿಲ್ದಾಣದ ಸುತ್ತಮುತ್ತ ಸಾಕಷ್ಟು ಸಂಖ್ಯೆಯ ನಾಯಿಗಳಿವೆ. ಮಾಂಸ ಮತ್ತು ಮೀನು ಮಾರುಕಟ್ಟೆಯಲ್ಲಿ ನಾಯಿಗಳದ್ದೇ ಕಾರುಬಾರು. ಗಲ್ಲಿ, ಗಟಾರದಲ್ಲಿ ಬೀಡು ಬಿಟ್ಟು, ಅಲ್ಲೇ ಮರಿ ಹಾಕಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿವೆ.

ಹೊಡೆಯುವ ಹಾಗಿಲ್ಲ: ಈ ಹಿಂದೆ ಬೀದಿ ನಾಯಿಗಳ ಹಾವಳಿ ಹೆಚ್ಚಾದಾಗ ಅವುಗಳನ್ನು ಹೊಡೆದು ಸಾಯಿಸಲಾಗುತ್ತಿತ್ತು. ಅದು ಸಾಕಷ್ಟು ಚರ್ಚೆಗೆ ಒಳಗಾಗಿ ದೊಡ್ಡ ಪ್ರಕರಣವೇ ಆಗಿತ್ತು. ಪ್ರಾಣಿದಯಾ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೀದಿನಾಯಿಗಳನ್ನು ಕೊಲ್ಲುವ ಕೆಲಸ ನಿಂತಿತು. ನಂತರ ನಾಯಿಗಳನ್ನು ಹಿಡಿದು ಹೊರಗಡೆ ಬಿಡುವ ಕ್ರಮ ಬಂತು. ಅದಕ್ಕೂ ವಿರೋಧ ಕೇಳಿಬಂದಿತು. ಬಿಟ್ಟು ಬಂದ ವಾರದಲ್ಲೇ ಮತ್ತೆ ಪ್ರತ್ಯಕ್ಷವಾದ ಉದಾಹರಣೆ ಇವೆ. ಇದೀಗ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡುವ ಕ್ರಮ ಜಾರಿಯಲ್ಲಿದೆ. ಇದು ಕಷ್ಟಕರ ಕೆಲಸವಾಗಿದ್ದು, ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಬೀದಿ ನಾಯಿಗಳ ನಿಯಂತ್ರಿಸಿ

ಶಿಕಾರಿಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ವಿವಿಧ ಬಡಾವಣೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಬೀದಿ ನಾಯಿಗಳ ಹಿಂಡು ಕಾಣಸಿಗುತ್ತದೆ.

ಪಟ್ಟಣದ ಬಸ್ ನಿಲ್ದಾಣ, ಮಿಡ್ಲ್ ಸ್ಕೂಲ್, ಶಿವಮೊಗ್ಗ ಸರ್ಕಲ್ ಸೇರಿ ಪ್ರಮುಖ ಸ್ಥಳಗಳಲ್ಲಿಯೇ ಗುಂಪುಗುಂಪಾಗಿ ಬೀದಿ ನಾಯಿಗಳು ತಿರುಗಾಡುತ್ತಿದ್ದು, ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೀದಿ ನಾಯಿಗಳನ್ನು ಕಂಡು ಜನರು ಭಯಭೀತರಾಗಿದ್ದಾರೆ. ಪಟ್ಟಣದಲ್ಲಿರುವ ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯ ನಾಯಿಗಳಿಗೆ ಆಹಾರವಾಗಿ ಸಿಗುತ್ತಿದೆ. ಬೀದಿ ನಾಯಿಗಳಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಮುಂಚೆ ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈಚೆಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬೀದಿ ನಾಯಿ ಹಾವಳಿ ಬಗ್ಗೆ ಚರ್ಚೆ ನಡೆಸಿದ್ದು, ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ನಿಯಂತ್ರಣಕ್ಕೆ ಬಾರದ ಬೀದಿ ನಾಯಿ

ಸಾಗರ: ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಕ್ರಮವನ್ನು ನಗರಸಭೆ ಕೈಗೊಂಡಿದ್ದರೂ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶದವರು ಗಂಡು ನಾಯಿ ಮರಿಯನ್ನು ತಮ್ಮಲ್ಲೇ ಇಟ್ಟುಕೊಂಡು ಹೆಣ್ಣು ಮರಿಯನ್ನು ಪೇಟೆ ಪ್ರದೇಶದ ಹೊರವಲಯಕ್ಕೆ ಬಿಟ್ಟು ಹೋಗುತ್ತಿರುವುದು ಅವುಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ಮೇ ತಿಂಗಳಿನಲ್ಲಿ ನಗರಸಭೆಯು ಬೀದಿ ನಾಯಿಗಳನ್ನು ಹಿಡಿಯುವ ಸಂಬಂಧ ಟೆಂಡರ್ ಕರೆದಿತ್ತು. ಶಿವಮೊಗ್ಗದ ವ್ಯಕ್ತಿಯೊಬ್ಬರು ಟೆಂಡರ್ ಹಿಡಿದಿದ್ದು, 723 ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಹೀಗೆ ಮಾಡಲು ಒಂದು ನಾಯಿಗೆ ₹ 1,499 ವೆಚ್ಚವಾಗಿದೆ ಎಂದು ಪುರಸಭೆ ಮೂಲಗಳು ತಿಳಿಸಿವೆ.

ನಾಯಿ ಕಚ್ಚಿದವರಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಲಭ್ಯವಿದೆ. ಬಿ.ಪಿ.ಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ನೀಡಲಾಗುತ್ತಿದೆ. ಉಳಿದವರು ಒಂದು ಡೋಸ್‌ಗೆ ₹ 100 ರಂತೆ ಐದು ಡೋಸ್‌ಗಳನ್ನು ಪಡೆದುಕೊಳ್ಳಬೇಕಿದೆ. ಗ್ರಾಮೀಣ ಭಾಗದವರಿಗೆ ನಾಯಿ ಕಚ್ಚಿದರೆ ಲಸಿಕೆ ಪಡೆಯಲು ಸಾಗರದ ಸರ್ಕಾರಿ ಆಸ್ಪತ್ರೆಗೆ ಬರಬೇಕಿದೆ.

***

ಹೊಸನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಈ ಕುರಿತು ಪಶು ಇಲಾಖೆಗೆ ಶಿಫಾರಸು ಮಾಡಲಾಗಿದೆ.

ಬಾಲಚಂದ್ರಪ್ಪ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಹೊಸನಗರ

***

ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಒಂದು ದಿನ, ತಿಂಗಳು ಮಾಡಿದರೆ ಉಪಯೋಗವಿಲ್ಲ. ಸತತ ನಾಲ್ಕೈದು ವರ್ಷ ಈ ಪ್ರಕ್ರಿಯೆ ನಡೆದರೆ ಮಾತ್ರ ನಾಯಿಗಳ ನಿಯಂತ್ರಣ ಸಾಧ್ಯ.

ಡಾ.ರಾಜೇಶ್‌ ಸುರಗೀಹಳ್ಳಿ, ಡಿಎಚ್‌ಒ, ಶಿವಮೊಗ್ಗ

***

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು ಕಂಡು ಬಂದಿದೆ. ಶೀಘ್ರದಲ್ಲಿ ಬೀದಿನಾಯಿಗಳನ್ನು ನಿಯಂತ್ರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಭರತ್, ಪುರಸಭೆ ಮುಖ್ಯಾಧಿಕಾರಿ, ಶಿಕಾರಿಪುರ

***

ನಾಯಿ ಕಚ್ಚಿಸಿಕೊಂಡವರು ವಿಳಂಬ ಮಾಡದೆ ತಕ್ಷಣ ಚುಚ್ಚುಮದ್ದು ಪಡೆಯಬೇಕು. ಕೆಲವರು ಸಂಜೆ ಅಥವಾ ರಾತ್ರಿ ವೇಳೆ ನಾಯಿ ಕಡಿದರೆ ಬೆಳಿಗ್ಗೆ ನೋಡೋಣ ಎಂದು ಸುಮ್ಮನಾಗುತ್ತಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ.

ಡಾ.ಎನ್.ಎಚ್. ಶ್ರೀಪಾದರಾವ್. ನಿವೃತ್ತ ಪಶು ವೈದ್ಯಾಧಿಕಾರಿ, ಸಾಗರ.

***

ಸುಪ್ರೀಂ ಕೋರ್ಟ್ ಆದೇಶದಂತೆ ಈಗ ಬೀದಿನಾಯಿ ಸೇರಿ ಯಾವುದೇ ಪ್ರಾಣಿಗಳನ್ನು ಕೊಲ್ಲುವಂತಿಲ್ಲ. ಅವುಗಳನ್ನು ಹಿಡಿಸಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಪ್ರಯತ್ನ ನಡೆಯುತ್ತಿದೆ.

ಮಧುರಾ ಶಿವಾನಂದ್‌, ನಗರಸಭೆ ಅಧ್ಯಕ್ಷರು, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.