ADVERTISEMENT

ಆರ್‌ಎಸ್‌ಎಸ್ ಲಾಠಿ ಬಿಜೆಪಿಗೆ ಬುದ್ದಿ ಕಲಿಸಲಿ; ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 13:19 IST
Last Updated 17 ಜನವರಿ 2019, 13:19 IST

ಶಿವಮೊಗ್ಗ:ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿರುವ ಬಿಜೆಪಿ ಪರ ಚಡ್ಡಿಹಾಕಿಕೊಂಡು ಚುನಾವಣೆಯಲ್ಲಿ ಮತ ಕೇಳಲು ಬರುವ ಆರ್‌ಎಸ್‌ಎಸ್ ಮುಖಂಡರು ಲಾಠಿಯಲ್ಲಿ ಹೊಡೆದು ಬುದ್ಧಿ ಕಲಿಸಬೇಕು ಎಂದು ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆಗ್ರಹಿಸಿದರು.

ಒಂದು ಪಕ್ಷದ ಟಿಕೆಟ್‌ ಪಡೆದು ಜನರಿಂದ ಆಯ್ಕೆಯಾದ ಶಾಸಕರಿಗೆ ಆಮಿಷ ಒಡ್ಡಲಾಗುತ್ತಿದೆ. ದೇಶಭಕ್ತಿಯ ಪಾಠ ಮಾಡುವ ಬಜರಂಗದಳ, ಆರ್‌ಎಸ್ಎಸ್‌, ಬಿಜೆಪಿ ಮುಖಂಡರಿಗೆ ನೈತಿಕತೆ ಇಲ್ಲವೇ?. ಅಧಿಕಾರ ಹಿಡಿಯಲು ಪದೇಪದೇ ವಿಫಲವಾದರೂ ಯಡಿಯೂರಪ್ಪ ಬುದ್ಧಿ ಕಲಿತಿಲ್ಲ. ಇದರಲ್ಲಿ ಅವರು ಪಾತ್ರಧಾರಿ. ಅಮಿತ್ ಷಾ ಸೂತ್ರಧಾರಿ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಛೇಡಿಸಿದರು.

ಮಂಗನ ಕಾಯಿಲೆಯಿಂದ ಜನರು ಸಾಯುತ್ತಿದ್ದಾರೆ. ಜನರ ಸಮಸ್ಯೆ ಆಲಿಸಬೇಕಾದ ಶಾಸಕರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಮೊದಲು ಇಂಥವರಿಗೆ ಮಂಗನಕಾಯಿಲೆಗೆ ಕಾರಣವಾಗುವ ಉಣಗುಗಳು ಕಚ್ಚಬೇಕು ಎಂದು ಆಶಿಸಿದರು.

ADVERTISEMENT

ಯಾರದೋ ದುಡ್ಡಲ್ಲಿ ದೆಹಲಿ ಯಾತ್ರೆ ಕೈಗೊಂಡಿರುವ ಬಿಜೆಪಿಯ ಶಾಸಕರು ಮೊದಲು ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ರೈತರ ಸಾಲಮನ್ನಾ ಮಾಡಲು ಒತ್ತಾಯಿಸಬೇಕು ಎಂದು ಒತ್ತಾಯಿಸಿದರು.

ಮಂಗನ ಕಾಯಿಲೆಯಿಂದ ಕೃಷಿಕರು, ಅರಣ್ಯವಾಸಿಗಳ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಹಾಗಾಗಿ, ಮೃತಪಟ್ಟವರ ಕುಟುಂಬಕ್ಕೆ ಹಾಗೂ ತೊಂದರೆಗೆ ಸಿಲುಕಿರುವ ಜನರಿಗೆ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.