ADVERTISEMENT

ಶಾಸಕರ ದುರಾಡಳಿತದಿಂದ ಅಭಿವೃದ್ಧಿ ಕುಂಠಿತ: ಮಧು ಬಂಗಾರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 5:38 IST
Last Updated 25 ಅಕ್ಟೋಬರ್ 2021, 5:38 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಸೊರಬ: ಶಾಸಕ ಕುಮಾರ್ ಬಂಗಾರಪ್ಪ ಅವರ ದುರಾಡಳಿತದಿಂದ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಂಡಿದ್ದು, ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ದಿವಾಳಿಯತ್ತ ಸಾಗುತ್ತಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.

‌ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಬಡವರು ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವುದು ಮಾನವೀಯ ಲಕ್ಷಣವಲ್ಲ. ಶಾಸಕ ಕುಮಾರ್ ಬಂಗಾರಪ್ಪ ಅವರ ನೀಚತನದಿಂದ ಅರಣ್ಯಹಕ್ಕು ಕಾಯ್ದೆಯಡಿ ರೈತರು ಅರ್ಜಿ ಸಲ್ಲಿಸಲು ಒಂದಕ್ಕಿಂತ ಹೆಚ್ಚು ದಾಖಲೆಗಳ ಅಗತ್ಯವಿದೆ. ಇದನ್ನು ಅರಿಯದೆ 75 ವರ್ಷಗಳ ದಾಖಲೆ ಸೇರಿ ಅನಗತ್ಯ ದಾಖಲೆಗಳ ನೆಪವೊಡ್ಡಿ ಅರ್ಜಿಗಳನ್ನು ವಜಾಗೊಳಿಸುವುದು ಸರಿಯಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರಕ್ಕೆ ಬಂದರೆ ಅರಣ್ಯ ಹಕ್ಕುಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿಕೆ ನೀಡಿದ ನಾಯಕರು ಏಕೆ ದನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಸಾಗುವಳಿ ರೈತರನ್ನು ಎಂದಿಗೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಜನರು ಶಾಸಕರನ್ನು ಆಯ್ಕೆ ಮಾಡುವುದು ತಮ್ಮ ಹಿತರಕ್ಷಣೆಗೆ. ಆದರೆ ಸೊರಬ ಕ್ಷೇತ್ರದಲ್ಲಿ ಶಾಸಕರಿಂದ ಜನರು ತೊಂದರೆ ಎದುರಿಸುತ್ತಿದ್ದಾರೆ. ಮರಳು, ಇಟ್ಟಿಗೆ ಒದಗಿಸಿಕೊಳ್ಳುವುದಕ್ಕೂ ರಾಜಕಾರಣ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದ ತಾಲ್ಲೂಕಿನ ಅಭಿವೃದ್ಧಿ ಹಳ್ಳ ಹಿಡಿದಿದೆ. ಪುರಸಭೆಯ 12 ಜನ ಸದಸ್ಯರಲ್ಲಿ 11 ಜನ ಸದಸ್ಯರು ಶಾಸಕರ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿಯಿಂದ ಆಯ್ಕೆಗೊಂಡ ಪುರಸಭೆ ಅಧ್ಯಕ್ಷರನ್ನೇ ಅಧಿಕಾರದ ಗಾದಿಯಿಂದ ಕೆಳಗಿಸಿದ್ದಾರೆ ಎಂದು ಕುಟುಕಿದರು.

ಕ್ಷೇತ್ರದಲ್ಲಿ ಶಾಸಕರ ವರ್ತನೆಯಿಂದ ಬಿಜೆಪಿ ಒಡೆದು ನಾಲ್ಕು ಬಾಗಿಲುಗಳಾಗಿದೆ. ಅಲ್ಲಿನ ಮುಖಂಡರಿಗೆ ಯಾವ ಬಾಗಿಲಿನಲ್ಲಿ ಹೋಗಬೇಕು ಎಂಬ ಪ್ರಶ್ನೆ ಎದುರಾಗಿದೆ. ಅವರು ಹೊರ ಬರಲು ಸಿದ್ಧರಾಗಿದ್ದಾರೆ ಎಂದರು.

ಅ.28ರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟನೆ, ಜನರ ಕುಂದುಕೊರತೆ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಗಣಪತಿ, ಎಪಿಎಂಸಿ ಉಪಾಧ್ಯಕ್ಷ ಜೆ. ಪ್ರಕಾಶ್, ಪುರಸಭೆ ಸದಸ್ಯ ಡಿ.ಎಸ್. ಪ್ರಸನ್ನಕುಮಾರ್, ಪರಶುರಾಮ ಸಣ್ಣಬೈಲು, ಜಗದೀಶ್ ಕುಪ್ಪೆ, ಮಂಜುನಾಥ್ ಚಿಕ್ಕಶಕುನ, ಪಾಂಡು ಕೊಡಕಣಿ, ನಂಜುಂಡ ಕಲ್ಲಂಬಿ, ಶ್ರೀಕಾಂತ್ ಬೆನ್ನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.