ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ವೇಗ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:37 IST
Last Updated 13 ಅಕ್ಟೋಬರ್ 2025, 5:37 IST
ಸೊರಬ ತಾಲ್ಲೂಕಿನ ಕುಪ್ಪಗಡ್ಡೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಮಾತನಾಡಿದರು
ಸೊರಬ ತಾಲ್ಲೂಕಿನ ಕುಪ್ಪಗಡ್ಡೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಮಾತನಾಡಿದರು   

ಸೊರಬ: ಬಡವರ ಏಳ್ಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಸಂಪುಟ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಕುಪ್ಪಗಡ್ಡೆಯಲ್ಲಿ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಜಿ.ಪಂ., ತಾ.ಪಂ., ಮೆಸ್ಕಾಂ, ಕುಪ್ಪಗಡ್ಡೆ ಗ್ರಾ.ಪಂ. ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಕಚೇರಿಯ ನೂತನ ಕೊಠಡಿ ಹಾಗೂ ಮೆಸ್ಕಾಂನ ನೂತನ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಅಭಿವೃದ್ಧಿ ವೇಗ ಪಡೆದಿದ್ದು, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ₹10 ಕೋಟಿ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ₹56 ಸಾವಿರ ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕಿನ ಉಳವಿ, ಕುಪ್ಪಗಡ್ಡೆ ಹಾಗೂ ಮಾವಲಿ ಗ್ರಿಡ್ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈಗಾಗಲೇ ಮಾವಲಿ ಹಾಗೂ ಉಳವಿ ಗ್ರಿಡ್ ನಿರ್ಮಾಣವಾಗಿದ್ದು, ಉಳವಿ ಹೋಬಳಿಯ ಇಂಡಿವಳ್ಳಿ ಗ್ರಾಮ ಹಾಗೂ ಕುಪ್ಪಗಡ್ಡೆ ಗ್ರಾಮದಲ್ಲಿ ₹56 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಟೆಂಡರ್ ಕರೆದು ಪೂರ್ವ ತಯಾರಿಗೆ ಸೂಚಿಸಲಾಗಿದೆ. ಇದರಲ್ಲಿ ಕುಪ್ಪಗಡ್ಡೆ ಗ್ರಿಡ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. 6 ಫೀಡರ್ ಗ್ರಿಡ್ ನಿರ್ಮಾಣಕ್ಕೆ ಅವಕಾಶವಿತ್ತು. ಆದರೆ ಇದೀಗ 20 ಫೀಡರ್ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಭಾರಿ ಸುರಿದ ಭಾರಿ ಮಳೆಗೆ ರಸ್ತೆಗಳು ಹಾಳಾಗಿವೆ. ಒಂದೂವರೆ ತಿಂಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಸುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ₹30 ಕೋಟಿ ವೆಚ್ಚದಲ್ಲಿ ಸೊರಬ-ಶಿರಾಳಕೊಪ್ಪ ರಸ್ತೆ ಕಾಮಗಾರಿ ನಡೆಯತ್ತಿದ್ದು, ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದರು.

ಗ್ರಾ.ಪಂ. ಅಧ್ಯಕ್ಷ ಬಿ.ನೂರ್‌ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ರಿಯಾಜ್ ಅಹ್ಮದ್, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಅನಿತಾ, ಲಲಿತಾ, ಮಮತಾ, ಮಲ್ಲಿಕಾರ್ಜುನ, ಮುಖಂಡರಾದ ಎಲ್.ಜಿ ರಾಜಶೇಖರ್, ಪುರಷೋತ್ತಮ, ಸದಾನಂದಗೌಡ, ಎಚ್.ಗಣಪತಿ, ಎಂ.ಡಿ ಶೇಖರ್, ಭಾಸ್ಕರ ಬೆಂಗಳೂರು, ಸಂತೋಷ್, ಲಕ್ಷ್ಮಿ, ಪರಶುರಾಮ, ಯುವರಾಜ್, ರಾಜಶೇಖರ್ ಕೆರೆಕೊಪ್ಪ, ಆನವಟ್ಟಿ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಮಂಜುನಾಥ ನಾಯ್ಕ, ಸುಮಾ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.