ADVERTISEMENT

ಕುಮಾರ್ ಬಂಗಾರಪ್ಪ ನಯ ವಂಚಕ: ಮಧು ಬಂಗಾರಪ್ಪ ಆರೋಪ

ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:18 IST
Last Updated 28 ಮಾರ್ಚ್ 2023, 6:18 IST
ಸೊರಬ ತಾಲ್ಲೂಕಿನ ತಾಳಗುಪ್ಪ ರೈತರ ಬಗರ್‌ಹುಕುಂ ಜಮೀನು ತೆರವುಗೊಳಿಸಿರುವುದನ್ನು ಖಂಡಿಸಿ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು.
ಸೊರಬ ತಾಲ್ಲೂಕಿನ ತಾಳಗುಪ್ಪ ರೈತರ ಬಗರ್‌ಹುಕುಂ ಜಮೀನು ತೆರವುಗೊಳಿಸಿರುವುದನ್ನು ಖಂಡಿಸಿ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು.   

ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ ಬಡವರ ಪರವಾದ ಹೋರಾಟದ ಮೂಲಕ ನ್ಯಾಯ ಕೊಡಿಸಿದರೆ, ಅವರ ಪುತ್ರರಾದ ಶಾಸಕ ಕುಮಾರ್ ಬಂಗಾರಪ್ಪ ಜನರ ವಿರುದ್ಧವಾಗಿ ಆಡಳಿತ ನಡೆಸುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.

ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ರೈತರ ಬಗರ್‌ಹುಕುಂ ಜಮೀನು ತೆರವುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ರಾಜಕಾರಣದಲ್ಲಿ ನಾನು ಸೋಲಿಗೆ ಹೆದರುವುದಿಲ್ಲ. ಬಂಗಾರಪ್ಪ ಅವರನ್ನು ಬೆಳೆಸಿದ ಜನಶಕ್ತಿಗೆ ಹೆದರುತ್ತೇನೆ. ಕ್ಷೇತ್ರದ ಜನರು ಬಂಗಾರಪ್ಪ ಎನ್ನುವ ಹೆಸರಿಗೆ ಶಕ್ತಿ ನೀಡಿದ್ದಾರೆ. ಅವರಂತೆಯೇ ತಾಲ್ಲೂಕಿನ ಜನರ ಸೇವೆ ಮಾಡಿತ್ತೇನೆಯೇ ಹೊರತು ಕುಮಾರ್ ಬಂಗಾರಪ್ಪ ಅವರಂತೆ ಅನ್ನ ನೀಡುವ ರೈತರು ಕಣ್ಣೀರು ಹಾಕುವಂತೆ ಎಂದಿಗೂ ಮಾಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಸದ ಬಿ.ವೈ. ರಾಘವೇಂದ್ರ ಅವರು ಶರಾವತಿ ಮುಳುಗಡೆ ಸಂತ್ರಸ್ತರ ಹಾಗೂ ಬಗರ್‌ಹುಕುಂ ರೈತರ ಪರವಾಗಿ ಸಂಸತ್‌ನಲ್ಲಿ ಧ್ವನಿ ಹೊರಡಿಸಿಲ್ಲ. ಕೇವಲ ಮತಕ್ಕೋಸ್ಕರ ರಾಜಕಾರಣ ಮಾಡುತ್ತಿರುವ ಬಿಜೆಪಿಗರು ಶೇ 40 ಕಮಿಷನ್‌ಗಾಗಿ ಬಡವರ ಮೇಲೂ ದೌರ್ಜನ್ಯ ನಡೆಸುತ್ತಾರೆ. ಶರಾವತಿ ಸಂತ್ರಸ್ತರ ಪರವಾಗಿ ಕಾನೂನು ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳು ಭರವಸೆ ನೀಡಿದ್ದಾರೆ ಎಂದು ದೂರಿದರು.

5 ವರ್ಷಗಳ ಅವಧಿಯಲ್ಲಿ ಸಾಗುವಳಿದಾರರ ಹಕ್ಕುಪತ್ರಗಳನ್ನು ವಜಾಗೊಳಿಸಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದಾರೆ. ತಾಳಗುಪ್ಪ ಗ್ರಾಮದ ಸರ್ವೆ ನಂ.20ರಲ್ಲಿ ಸಾಗುವಳಿ ಮಾಡಿದ್ದ 27ಎಕರೆ ಫಸಲು ನೀಡುತ್ತಿದ್ದ ಅಡಿಕೆ ತೋಟವನ್ನು ನಾಶ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ಬಂಗಾರಪ್ಪ ಅವರು ಬಡವರು, ಕೂಲಿ ಕಾರ್ಮಿಕರು ಉದ್ಧಾರ ಆಗಬೇಕು ಎಂದು ಕನಸು ಕಂಡರೆ ಶಾಸಕ ಕುಮಾರ್ ಬಂಗಾರಪ್ಪ ಸ್ವಾರ್ಥ ರಾಜಕಾರಣಕ್ಕಾಗಿ ಸುಳ್ಳನ್ನು ಸತ್ಯ ಎಂದು ಬಿಂಬಿಸಿ ಬಡವರ ಮನೆ ಮುರಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿ ಹತಾಶೆಯಂತೆ ವರ್ತಿಸುತ್ತಿರುವ ಶಾಸಕರಿಗೆ ತಾಲ್ಲೂಕಿನ ಜನರು ತಮಗೆ ಮಾಡಿರುವ ಮೋಸ, ದ್ರೋಹಕ್ಕೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ, ಯುವ ಘಟಕದ ಅಧ್ಯಕ್ಷ ಪ್ರವೀಣಕುಮಾರ್, ಜನಪರ ಹೋರಾಟಗಾರ ಕೆ. ಮಂಜುನಾಥ್ ಹಳೇಸೊರಬ, ಮುಖಂಡರಾದ ತಬಲಿ ಬಂಗಾರಪ್ಪ, ಕೆ.ವಿ. ಗೌಡ, ರಮೇಶ್ ಕುಮಾರ್, ರಮೇಶ್ ಇಕ್ಕೇರಿ, ಸುಜಾತಾ ಜೋತಾಡಿ, ಎಚ್. ಗಣಪತಿ, ಎಂ.ಡಿ. ಶೇಖರ್, ಆರ್.ಸಿ. ಪಾಟಿಲ್, ನೆಹರೂ ಕೊಡಕಣಿ, ರವಿ ಬರಗಿ, ಕಾಶಿ, ರಾಜೇಶ್, ಮಂಜು, ಪ್ರಕಾಶ್ ಹಳೇಸೊರಬ ಸೇರಿ ಸಾವಿರಾರು ಬಗರ್‌ಹುಕುಂ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.