ಶಿವಮೊಗ್ಗ: ‘ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಯಶಸ್ಸು ಬಿಜೆಪಿಯ ಸೋಲು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪ್ರತಿಪಾದಿಸಿದ್ದಾರೆ.
‘ಸಮೀಕ್ಷೆಯನ್ನು ವಿರೋಧಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರು ಸಂವಿಧಾನಬಾಹಿರ ನಡೆ ಪ್ರದರ್ಶಿಸುತ್ತಿದ್ದಾರೆ. ಅವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಲಿ’ ಎಂದು ಅವರು ಶುಕ್ರವಾರ ಇಲ್ಲಿ ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸಮೀಕ್ಷೆಯನ್ನು ಐದು ದಿನಗಳಲ್ಲೇ ಪೂರ್ಣಗೊಳಿಸಿದ 25 ಜನ ಶಿಕ್ಷಕರನ್ನು ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.
‘ಚಿಕ್ಕ ಸಮುದಾಯಗಳು, ಅರ್ಥಿಕವಾಗಿ ಹಿಂದುಳಿದವರ ಪ್ರಗತಿ ಸಮೀಕ್ಷೆಯ ಉದ್ದೇಶ. ಆದರೆ ಅದಕ್ಕೆ ವಿರೋಧಿಸುತ್ತಿರುವ ಬಿಜೆಪಿಯ ತೇಜಸ್ವಿ ಸೂರ್ಯ, ಪ್ರಲ್ಹಾದ ಜೋಶಿ, ವಿಜಯೇಂದ್ರ, ಆರ್.ಅಶೋಕ ಅವರ ಹಿನ್ನೆಲೆ ಏನು? ಅವರ ಪ್ರಕಾರ ಆರ್ಥಿಕವಾಗಿ ಹಿಂದುಳಿದವರು, ತಳ ಸಮುದಾಯದವರು ಇರುವ ಸ್ಥಿತಿಯಲ್ಲೇ ಇರಬೇಕೇ? ಎಂದು ಕಟುವಾಗಿ ಪ್ರಶ್ನಿಸಿದರು.
‘ಸಮೀಕ್ಷೆ ನೆಪದಲ್ಲಿ ಸರ್ಕಾರ ಜನರ ದತ್ತಾಂಶ ಕದಿಯುತ್ತಿದೆ’ ಎಂದು ಆರ್.ಅಶೋಕ ಹೇಳಿದ್ದಾರೆ. ಇಷ್ಟು ದಿನ ದೇಶದ ಜನರ ದತ್ತಾಂಶ ಕದ್ದು ಅದಾನಿ ಮತ್ತು ಅಂಬಾನಿಯವರಿಗೆ ಮಾರಿರುವ ಬಿಜೆಪಿಯವರಿಂದ ಇಂತಹ ಹೇಳಿಕೆ ಸಹಜ’ ಎಂದೂ ತಿರುಗೇಟು ನೀಡಿದರು.
‘ಸಮೀಕ್ಷೆಯ ಮಹತ್ವ ಗೊತ್ತಿರುವುದರಿಂದಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿಲ್ಲ. ಹೀಗಿದ್ದಾಗ ಬಿಜೆಪಿಯ ಉಳಿದ ನಾಯಕರು ಏನೂ ತಿಳಿವಳಿಕೆ ಇಲ್ಲದಂತೆ ಮಾತಾಡುತ್ತಿರುವುದೇಕೆ?’ ಎಂದೂ ಪ್ರಶ್ನಿಸಿದರು.
‘ಈ ಸಮೀಕ್ಷೆ ಮೂಲಕ ಸಿದ್ದರಾಮಯ್ಯ ಅವರು ಜಾತಿ, ಧರ್ಮ ಒಡೆಯುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ. ರಾಜ್ಯದಲ್ಲಿ ಮೊದಲು ಜಾತಿ ರಾಜಕಾರಣ ಆರಂಭಿಸಿದವರು ಯಡಿಯೂರಪ್ಪ ಎಂಬುದನ್ನು ಅವರು ನೆನಪು ಮಾಡಿಕೊಳ್ಳಲಿ. ಆರ್ಥಿಕವಾಗಿ ಹಿಂದುಳಿದವರು, ದುರ್ಬಲ ವರ್ಗದವರ ಸ್ಥಿತಿಗತಿ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲದೆಯೇ ಸಮೀಕ್ಷೆ ವಿರೋಧಿಸುತ್ತಿರುವ ವಿಜಯೇಂದ್ರ ಇನ್ನೂ ಬಚ್ಚಾ’ ಎಂದು ವ್ಯಂಗ್ಯವಾಡಿದರು.
ಸಮೀಕ್ಷಕರಿಗೆ ಮಾಹಿತಿ ಕೊಡುವುದಿಲ್ಲ ಎಂಬ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಪಸು ಪಡೆಯಲಿ. ವಿರೋಧ ಪಕ್ಷದವರಾಗಿ ಸಮೀಕ್ಷೆ ಯಶಸ್ಸಿಗೆ ಅಗತ್ಯ ಸಲಹೆ ಕೊಡಲಿ
-ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ
‘ಸಮೀಕ್ಷೆ ಕಾರ್ಯ ಶೇ 56ರಷ್ಟು ಪೂರ್ಣ’
ದಸರಾ ರಜೆ ಹಬ್ಬವನ್ನು ಕುಟುಂಬದವರ ಜೊತೆ ಕಳೆಯದೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ರಾಜ್ಯದ ಇಡೀ ಶಿಕ್ಷಕ ಸಮೂಹ ಗೌರವಕ್ಕೆ ಅರ್ಹ ಎಂದು ಮಧು ಬಂಗಾರಪ್ಪ ಶ್ಲಾಘಿಸಿದರು. ‘ಸಮೀಕ್ಷೆ ಕಾರ್ಯ ರಾಜ್ಯದಲ್ಲಿ ಶೇ 56ರಷ್ಟು ಪೂರ್ಣಗೊಂಡಿದೆ. ಶೇ 63.46ರಷ್ಟು ಸಮೀಕ್ಷೆ ಪೂರ್ಣಗೊಂಡಿರುವ ಶಿವಮೊಗ್ಗ ಜಿಲ್ಲೆ ರಾಜ್ಯಮಟ್ಟದಲ್ಲಿ 14ನೇ ಸ್ಥಾನ ಪಡೆದಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.