ಶಿವಮೊಗ್ಗ: ‘ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಮಡಿವಾಳ ಸಮುದಾಯದವರು ಹಿಂದುಳಿದಿದ್ದಾರೆ. ಆದ್ದರಿಂದ, ಬಡತನದ ಸಂಕೋಲೆಯಿಂದ ಹೊರ ಬಂದು ಸುಂದರ ಬದುಕು ರೂಪಿಸಿಕೊಳ್ಳಬೇಕು. ಇದು ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದು ಮುಖ್ಯಮಂತ್ರಿಯವರ ಆರೋಗ್ಯ ಸಲಹೆಗಾರ ಡಾ.ಎಚ್. ರವಿಕುಮಾರ್ ಕಿವಿಮಾತು ಹೇಳಿದರು.
ಮಡಿವಾಳ ಸಮಾಜದ ಜಿಲ್ಲಾ ಘಟಕ ಹಾಗೂ ‘ಮನ ಮನೆಗೆ ಮಾಚಿದೇವ’ ಕಾರ್ಯಕ್ರಮ ಆಚರಣೆ ಸಮಿತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಡಿವಾಳ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮಗು ಅತ್ತಾಗ ಮಾತ್ರ ತಾಯಿ ಹಾಲು ಕುಡಿಸುತ್ತಾಳೆ. ನಮ್ಮ ಸಮಾಜದ ಏಳಿಗೆಗಾಗಿ ನಾವೇ ಎಲ್ಲರ ಮನೆ ಬಾಗಿಲಿಗೆ ಹೋಗಿ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದರು.
‘ಸಂವಿಧಾನಬದ್ಧ ಹಕ್ಕುಗಳಿಗಾಗಿ, ಸರ್ವತೋಮುಖ ಅಭಿವೃದ್ಧಿಗಾಗಿ ತಳಸಮುದಾಯಗಳು ಸಂಘಟಿತವಾಗಬೇಕು. ನಿತ್ಯ ಕಾಯಕದಲ್ಲಿ ತೊಡಗಿರುವ ಮಡಿವಾಳ ಸಮಾಜದ ಒಗ್ಗಟ್ಟಿನ ಸಂಘಟನೆಗಾಗಿ ಜಾಗೃತಿ ಅವಶ್ಯಕತೆ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.
‘ಅಸಂಘಟಿತ ಹಾಗೂ ಜನಸಂಖ್ಯೆಯಲ್ಲಿ ಕಡಿಮೆ ಇರುವ ಕಾರಣ ರಾಜಕೀಯವಾಗಿ ಮೂಲೆಗುಂಪು ಆಗಿದ್ದೇವೆ. ನ್ಯಾಯಬದ್ಧ ಹಾಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಮ್ಮ ಸಮುದಾಯಕ್ಕೆ ಆಳುವ ಸರ್ಕಾರಗಳು ನ್ಯಾಯ ದೊರಕಿಸಿಕೊಡಬೇಕು’ ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸದಾಶಿವಪ್ಪ ಒತ್ತಾಯಿಸಿದರು.
ಪ್ರಮುಖರಾದ ಮಧುಕುಮಾರ್, ಗಣೇಶ್, ಸುಧೀರ್ ಎಸ್. ಗಂಗಪ್ಪ, ಕುಮಾರ್, ತುಷಾರ್ ಡಿ. ಹೊಸೂರು ಇದ್ದರು.
‘ಮಾಚಿದೇವರ ಆದರ್ಶ ಪಾಲಿಸಿ’
‘ಮಾಚಿದೇವ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ನೋವುಗಳನ್ನು ವಚನಗಳಲ್ಲಿ ಬಿಚ್ಚಿಟ್ಟರು. ಆ ಮೂಲಕ 12ನೇ ಶತಮಾನದಲ್ಲಿ ಮಹಾನ್ ಸಮಾಜ ಸುಧಾರಕರಾಗಿ ಹೊರಹೊಮ್ಮಿದರು. ಅವರ ವಚನಗಳ ಆಶಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿಯವರ ಆರೋಗ್ಯ ಸಲಹೆಗಾರ ಡಾ.ಎಚ್. ರವಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.