ADVERTISEMENT

ಆರೋಗ್ಯ ಮೇಳ: ಸರ್ಕಾರದ ಸೌಲಭ್ಯ ಸದು‍ಪಯೋಗಪಡಿಸಿಕೊಳ್ಳಿ- ಶಾಸಕ ಕುಮಾರ್ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 1 ಮೇ 2022, 6:16 IST
Last Updated 1 ಮೇ 2022, 6:16 IST
ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಿದರು.
ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಿದರು.   

ಸೊರಬ: ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಸರ್ಕಾರ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಆರೋಗ್ಯ ಮೇಳ ನಡೆಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮವಾದ ವೈದ್ಯಕೀಯ ಸೇವೆ ಲಭಿಸಬೇಕು ಎನ್ನುವ ಸದುದ್ದೇಶದಿಂದ ಆರೋಗ್ಯ ಮೇಳ ನಡೆಸಲಾಗುತ್ತಿದೆ. ಆರೋಗ್ಯ ಮೇಳದಿಂದ ಹೆಚ್ಚಿನ ಚಿಕಿತ್ಸೆಗೆ ತೆರಳುವವರಿಗೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಸಾಹುಕಾರ್, ‘ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎಂಬ ಮುಖ್ಯ ಧ್ಯೇಯದೊಂದಿಗೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ’ ಎಂದರು.

ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಿಂದ ಸಂಭವಿಸುವ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಜನರಿಗೆ ಉಚಿತ ಪ್ರಯೋಗಾಲಯ ಸೇವೆಗಳನ್ನು ಒದಗಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಶೇಷ ಯೋಜನೆಗಳಾದ ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಣೆ ಮತ್ತು ನಾಗರಿಕರಿಗೆ ಡಿಜಿಟಲ್ ಆರೋಗ್ಯ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್ ಮಂಜುಳಾ ಹೆಗಡಾಳ್, ತಾಲ್ಲೂಕು ಪಂಚಾಯಿತಿ ಇಒ ಕೆ.ಜಿ. ಕುಮಾರ್, ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಎ.ಡಿ. ಉಮೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ದಿನೇಶ್, ವೈದ್ಯರಾದ ಡಾ.ವಿನಯ್ ಪಾಟೀಲ್, ಡಾ.ಸತೀಶ್ ನಾಯ್ಕ್, ಡಾ.ಅಪೂರ್ವ, ಡಾ.ಶ್ವೇತಾ, ಡಾ.ಸುನಿತಾ, ಡಾ.ಅಮಿತಾ, ಡಾ.ಸುಪ್ರಿಯಾ, ಡಾ.ರಜನಿ, ಡಾ.ನವ್ಯಾ, ಡಾ.ಬಿಂದ್ಯಾ, ಡಾ.ಡಿ.ಜೆ. ಪಾಟೀಲ್, ಡಾ.ಶಕುಂತಲಾ, ಡಾ.ಬಾಲಾಜಿ ನಾಯ್ಕ್, ಡಾ.ಹರ್ಷಾ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.