ADVERTISEMENT

ನಾಟಿ ಮಾಡಲು ಅಡ್ಡಿ; ಆತ್ಮಹತ್ಯೆಗೆ ವೃದ್ಧೆ ಯತ್ನ

ಜಮೀನು ವಿವಾದದ ಕಾರಣ ಏಳು ವರ್ಷಗಳಿಂದ ಸಾಮಾಜಿಕ ಬಹಿಷ್ಕಾರ?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:59 IST
Last Updated 1 ಆಗಸ್ಟ್ 2024, 15:59 IST
ಸೊರಬ ತಾಲ್ಲೂಕಿನ ಕುದುರೆಗಣಿ ಗ್ರಾಮದ ಕೆಲವು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿರುವ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು
ಸೊರಬ ತಾಲ್ಲೂಕಿನ ಕುದುರೆಗಣಿ ಗ್ರಾಮದ ಕೆಲವು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿರುವ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು   

ಸೊರಬ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕುದುರೆಗಣಿ ಗ್ರಾಮದಲ್ಲಿ ಕೆಲವು ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ವೃದ್ಧೆಯೊಬ್ಬರು ವಿಷ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬ ಸದಸ್ಯರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ಭತ್ತ ನಾಟಿಗೆ ಸಿದ್ಧಪಡಿಸಿದ್ದ ಸಸಿ ಮಡಿಗಳನ್ನು ಬೆಳಗಿನಜಾವ ಗ್ರಾಮದ ಕೆಲವರು ಬದು‌ವಿನ ಸಮೇತ ನಾಶಗೊಳಿಸಿದ್ದರು.

ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದ ವೃದ್ಧೆ ಪುಟ್ಟಮ್ಮ (85) ಅವರು ಈ ಬೆಳವಣಿಗೆಯಿಂದ ಮತ್ತಷ್ಟು ನೊಂದುಕೊಂಡು ಗುರುವಾರ ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ADVERTISEMENT

‘ಪುಟ್ಟಮ್ಮ ಅವರು ಸಾಗುವಳಿ ಮಾಡುತ್ತಿದ್ದ ಭೂಮಿ ಗ್ರಾಮದ ವೀರಭದ್ರ ದೇವಸ್ಥಾನಕ್ಕೆ ಸೇರಿದ್ದು ಎಂಬ ವಿವಾದ ಸೃಷ್ಟಿಯಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಜಮೀನು ಬಿಟ್ಟು ಕೊಡುವಂತೆ ಒತ್ತಡ ಹೇರಿ ನಿತ್ಯ ಕಿರುಕುಳ ನೀಡಿ ಇಡೀ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ’ ಎಂದು ಪುಟ್ಟಮ್ಮ ಅವರ ಕುಟುಂಬ ಸದಸ್ಯರಾದ ಇಂದ್ರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಪುಟ್ಟಮ್ಮ ಅವರು ದಾಖಲಾಗಿರುವ ಆಸ್ಪತ್ರೆ ಎದುರು ಕುಟುಂಬದ ಎಲ್ಲ ಸದಸ್ಯರೂ ಜಮಾಯಿಸಿದ್ದು, ಆತಂಕ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

‘ಜಮೀನು ಬಿಟ್ಟುಕೊಡುವಂತೆ ಗ್ರಾಮಸ್ಥರು ಗುರುವಾರ ಪುಟ್ಟಮ್ಮ ಅವರ ಜಮೀನಿನಲ್ಲಿ ಸಸಿ ಮಡಿ ಹಾಳು ಮಾಡಿ ಬೆಳೆ ಬೆಳೆಯಲು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕುದುರೆಗಣಿ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಪಿಎಸ್ಐ ನಾಗರಾಜ್ ತಿಳಿಸಿದ್ದಾರೆ.

ಅನೇಕ ವರ್ಷಗಳಿಂದಲೂ ನಮ್ಮ ಕುಟುಂಬದವರೇ ಜಮೀನು ಉಳುಮೆ‌ ಮಾಡುತ್ತಿದ್ದೇವೆ. ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ನಮಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ.

-ಪುಂಡಲೀಕ ಪುಟ್ಟಮ್ಮ ಅವರ ಮಗ

ಗ್ರಾಮದ ಯಾವುದೇ ವ್ಯಕ್ತಿ ನಮ್ಮ ಜೊತೆಗೆ ಮಾತನಾಡಿದರೆ ₹ 10000 ದಂಡ ವಿಧಿಸಲಾಗುತ್ತಿದೆ. ನಮ್ಮ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು.

-ಜಯಮ್ಮ ಪುಟ್ಟಮ್ಮ ಅವರ ಸೊಸೆ

ವಿವಾದಿತ ಜಮೀನು ದೇವಸ್ಥಾನಕ್ಕೆ ಸಂಬಂಧಪಟ್ಟಿದ್ದು ಅರ್ಜಿದಾರರು ಹಾಗೂ ಗ್ರಾಮಸ್ಥರಿಗೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಕೋರ್ಟ್ ಆದೇಶವಿದೆ. ಕೋರ್ಟ್ ಆದೇಶಕ್ಕೆ ಬದ್ಧರಾಗಿರುವಂತೆ ಸೂಚಿಸಲಾಗಿದೆ. -ಮಂಜುಳಾ ಹೆಗಡಾಳ್ ತಹಶೀಲ್ದಾರ್

ಕುದುರೆಗಣಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲನೆ ನಡೆಸಿ ಬಹಿಷ್ಕಾರದಂತಹ ಸಂಗತಿ ನಡೆದಿದ್ದರೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವಂತೆ ತಹಶೀಲ್ದಾರ್‌ಗೆ ಸೂಚಿಸುತ್ತೇನೆ.

-ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಸಮಸ್ಯೆಗೆ ದೊರೆಯದ ಪರಿಹಾರ..

ಬಹಿಷ್ಕಾರಕ್ಕೆ ಒಳಗಾಗಿರುವ ಪ್ರಕರಣ ಬೆಳಕಿಗೆ ಬಂದಾಗ ತಾಲ್ಲೂಕು ಆಡಳಿತ ಗಂಭೀರವಾಗಿ ಪರಿಗಣಿಸದ್ದರಿಂದ ಕುಟುಂಬ ಸದಸ್ಯರು ಏಳು ವರ್ಷಗಳಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದು ಬಹಿಷ್ಕೃತ ಸದಸ್ಯರು ತಿಳಿಸಿದರು. ಈ ಹಿಂದೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ತಾಲ್ಲೂಕು ಆಡಳಿತ ಸಮಸ್ಯೆಯನ್ನು ಪರಿಹರಿಸದ್ದರಿಂದ ಬಹಿಷ್ಕಾರದಂಥ ಪಿಡುಗು ಮುಂದುವರಿಸದೇ ಇದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.