
ಶಿವಮೊಗ್ಗ: ಸರ್ಕಾರಿ ನೌಕರಿ ಎಂದರೆ ಜನಸೇವೆ ಮಾಡಲು ಸಿಕ್ಕ ಅವಕಾಶವೇ ಹೊರತು ಅಧಿಕಾರ ಸಾಧಿಸುವ ವೇದಿಕೆ ಅಲ್ಲ. ಹೀಗಾಗಿ ಸರ್ಕಾರಿ ನೌಕರರ ಮನೋಭಾವ ಬದಲಾಗಬೇಕು. ಆಗ ಮಾತ್ರ ಸರ್ಕಾರಿ ಇಲಾಖೆಗಳಲ್ಲಿ ಶೇ.50ರಷ್ಟು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ಲೋಕಾಯುಕ್ತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ನಿಗ್ರಹ ಕಾನೂನುಗಳಲ್ಲೇ ಬಹಳಷ್ಟು ಲೋಪಗಳಿದ್ದು, ಕಾನೂನು ಮೂಲಕ ಭ್ರಷ್ಟಾಚಾರ ತಡೆಯಲು ಸಾಧ್ಯವಾಗುತ್ತಿಲ್ಲ. ಇದರ ಉಪಯೋಗ ಭ್ರಷ್ಟಾಚಾರದಲ್ಲಿ ತೊಡಗಿರುವವರೇ ಹೆಚ್ಚಾಗಿ ಪಡೆಯುತ್ತಿದ್ದಾರೆ. ಹಾಗಾಗಿ ಇದರ ಸಂಪೂರ್ಣ ನಿರ್ಮೂಲನೆ ಅಸಾಧ್ಯ. ಆದ್ದರಿಂದ ಸರ್ಕಾರಿ ನೌಕರರಿಗೆ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಎಂದು ಹೇಳಿದರು.
‘ಸರ್ಕಾರಿ ನೌಕರರ ನಗದು ವ್ಯವಹಾರ ಪ್ರಶ್ನಾರ್ಥಕವಾಗಿದೆ. ಅವರು ₹20 ಸಾವಿರಕ್ಕಿಂತ ಅಧಿಕ ಖರ್ಚು ಮಾಡುವುದಾದರೆ ಅದನ್ನು ಬ್ಯಾಂಕ್ ಮೂಲಕ ಮಾಡಬೇಕು. ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಸರ್ಕಾರಿ ನೌಕರರು ₹20 ಸಾವಿರಕ್ಕಿಂತ ಅಧಿಕ ನಗದು ವ್ಯವಹಾರ ಮಾಡಿದರೆ ಅದನ್ನು ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಡಿಸಬೇಕು ಎಂದು ತಿಳಿಸಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್ ಹೇಳಿದರು.
‘ಸರ್ಕಾರಿ ನೌಕರರು ತಮ್ಮ ಹೆಂಡತಿ, ಮಕ್ಕಳ ಆದಾಯ ಇದ್ದರೆ ಅದನ್ನು ವರದಿ ಮಾಡಬೇಕು. ಹೊಸದಾಗಿ ಅಧಿಕಾರ ವಹಿಸಿಕೊಳ್ಳುವ ಇಲಾಖೆಯಲ್ಲಿ ಹಿಂದಿನ ಅಧಿಕಾರದ ಅವಧಿಯಲ್ಲಿ ಮಾಡಿದ ಲೋಪದ ಬಗ್ಗೆ ಲೋಕಾಯುಕ್ತ ಅಧಿಕಾರಿಗೆ ಹಾರಿಕೆ ಉತ್ತರ ನೀಡದೇ ಮಾಹಿತಿ ನೀಡಬೇಕು’ ಎಂದು ಹೇಳಿದರು.
‘ಅಧಿಕಾರಿಗಳು ತಮ್ಮ ಖಾಸಗಿ ಜೀವನದಲ್ಲಿ ಬೇರೆ ಇಲಾಖೆಯ ಬಗ್ಗೆ ನಕರಾತ್ಮಕವಾಗಿ ಮಾತನಾಡಬಾರದು. ಇದರಿಂದ ಸರ್ಕಾರಿ ಅಧಿಕಾರಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಅಧಿಕಾರಿಗಳು ತಮ್ಮ ಖಾಸಗಿ ಜೀವನದಲ್ಲಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಎನ್.ಹೇಮಂತ್. ಸಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ, ಲೋಕಾಯುಕ್ತ ಎಸ್ಪಿ ಎಂ.ಎಚ್. ಮಂಜುನಾಥ ಚೌಧರಿ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ರುದ್ರೇಶ್ ಹಾಜರಿದ್ದರು.
ಹಣ ಅಧಿಕಾರದ ಪ್ರಭಾವದಿಂದ ಭ್ರಷ್ಟಾಚಾರ ಆರಂಭವಾಗುತ್ತದೆ. ಅಧಿಕಾರಿಗಳು ಯಾರ ಪ್ರಭಾವಕ್ಕೂ ಒಳಗಾಗದೇ ಕಾನೂನು ಕಾಯ್ದೆಯಡಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕುಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.