ADVERTISEMENT

ನಂಬಿಕೆ ಎಂಬುದು ಅರಿವಿನ ಪಥ: ಇಮ್ಮಡಿ ಸಿದ್ದರಾಮೇಶ್ವರ ಶ್ರೀ

ಬೈರನಕೊಪ್ಪ ಕ್ಯಾಂಪ್ ಮಾರಿಯಮ್ಮ ದೇವಸ್ಥಾನದ ಗೋಪುರ ಕಳಶಾರೋಹಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 16:00 IST
Last Updated 5 ಜೂನ್ 2025, 16:00 IST
ಶಿವಮೊಗ್ಗ ತಾಲ್ಲೂಕಿನ ಬೈರನಕೊಪ್ಪ ಕ್ಯಾಂಪ್ ಹಾರನಹಳ್ಳಿ ಗ್ರಾಮದಲ್ಲಿ ಜರುಗಿದ ಮಾರಿಯಮ್ಮ ದೇವಾಲಯದ ಗೋಪುರ ಕಳಶ ಪ್ರತಿಷ್ಠಾಪನೆ ಸಮಾರಂಭದಲ್ಲಿ ಸ್ವಾಮೀಜಿ ಅವರನ್ನು ಗೌರವಿಸಲಾಯಿತು
ಶಿವಮೊಗ್ಗ ತಾಲ್ಲೂಕಿನ ಬೈರನಕೊಪ್ಪ ಕ್ಯಾಂಪ್ ಹಾರನಹಳ್ಳಿ ಗ್ರಾಮದಲ್ಲಿ ಜರುಗಿದ ಮಾರಿಯಮ್ಮ ದೇವಾಲಯದ ಗೋಪುರ ಕಳಶ ಪ್ರತಿಷ್ಠಾಪನೆ ಸಮಾರಂಭದಲ್ಲಿ ಸ್ವಾಮೀಜಿ ಅವರನ್ನು ಗೌರವಿಸಲಾಯಿತು   

ಶಿವಮೊಗ್ಗ: ನಂಬಿಕೆ ಎಂಬುದು ಅರಿವು. ಮೂಢನಂಬಿಕೆ ಎಂಬುದು ಅಜ್ಞಾನ ಎಂದು ಚಿತ್ರದುರ್ಗದ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೈರನಕೊಪ್ಪ ಕ್ಯಾಂಪ್ ಹಾರನಹಳ್ಳಿ ಗ್ರಾಮದಲ್ಲಿ ಜರುಗಿದ ಮಾರಿಯಮ್ಮ ದೇವಾಲಯದ ಗೋಪುರ ಕಳಶ ಪ್ರತಿಷ್ಠಾಪನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮೂಢನಂಬಿಕೆಗಳು ಮನುಷ್ಯನ ಹುಟ್ಟಿನಷ್ಟೇ ಹಳೆಯದಾಗಿವೆ. ಅವು ಶತಮಾನಗಳಿಂದ ಮಾನವನ ಜೀವನದೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿವೆ. ಅಂಜಿಕೆ, ಅಜ್ಞಾನಗಳೇ ಇವುಗಳ ಮೂಲ. ಮೂಢನಂಬಿಕೆ ಪ್ರಕೃತಿ ನಿಯಮಗಳಿಗೆ ಅಥವಾ ವಿಜ್ಞಾನದ ತಿಳಿವಳಿಕೆಗೆ ವಿರುದ್ಧವಾಗಿರುತ್ತದೆ ಎಂದರು.

ADVERTISEMENT

ಎಲ್ಲ ನಂಬಿಕೆಗಳು ಮೂಢನಂಬಿಕೆಗಳು ಎಂದಲ್ಲ. ಕೆಲವು ನಂಬಿಕೆಗಳಲ್ಲಿ ಹುರುಳಿದ್ದರೂ ಕೆಲವು ವಿನಾಕಾರಣ ಬೆಳೆಯಹುದು. ಈ ಮೂಢನಂಬಿಕೆಗಳು ಒಂದು ದೇಶದ ಬೆಳವಣಿಗೆಯನ್ನು ಕುಂಠಿತಗೊಳಿಸಲೂಬಹುದು. ಆದ್ದರಿಂದ ಯಾವುದೇ ನಂಬಿಕೆಗಳನ್ನು ಅದರ ಹಿನ್ನೆಲೆ ಅರಿಯದೇ ನಂಬಬಾರದು ಎಂದು ಹೇಳಿದರು.

ಮೂಢನಂಬಿಕೆಯು ಸಮಾಜಕ್ಕೆ ಅಂಟಿದ ಶಾಪ. ಅದು ಅಜ್ಞಾನ ಮತ್ತು ಭಯದ ವಾತಾವರಣ ಸೃಷ್ಟಿಸುತ್ತದೆ. ಹಾಗೆ ಕತ್ತಲೆಯ ಜಗತ್ತನ್ನು ಸೃಷ್ವಿಸುತ್ತದೆ. ವಿಜ್ಞಾನ ಮತ್ತು ಅದರ ಪರಿಶೋಧನೆಯಿಂದ ಮೂಢನಂಬಿಕೆಗಳ ವಿರುದ್ಧ ಸಮಾಜಕ್ಕೆ ಸಾಕಷ್ಟು ಅರಿವು ಮೂಡಿಸಬಹುದಾಗಿದೆ. ಈ ಮೂಢನಂಬಿಕೆಯಿಂದ ಆಗುವ ಶೋಷಣೆಗಳನ್ನು ತಪ್ಪಿಸಬೇಕು ಎಂದರು.

ಹಾರನಹಳ್ಳಿ ಚೌಕಿಮಠದ ನೀಲಕಂಠೇಶ್ವರ ಸ್ವಾಮೀಜಿ ಮಾತನಾಡಿದರು. ಸಮಾರಂಭದಲ್ಲಿ ಬಿಜೆಪಿ ಎಸ್‌ಸಿ ಮೊರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂತೋಷ ಹೊಳಲೂರು, ಅಬ್ಬಲಗೆರೆ ಗ್ರಾಮ ಪಂಚಾಯಿತಿ ಸದಸ್ಯ ಜಿ.ಮಂಜುನಾಥ, ಬೈರನಕೊಪ್ಪ ಗಂಗಾಧರಪ್ಪ, ಸುಶೀಲ, ವಿಜಯಮ್ಮ, ಹರೀಶ, ರಮೇಶ, ಯಲ್ಲಮ್ಮ, ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.