ADVERTISEMENT

ಹೆಚ್ಚಿದ ಸುದ್ದಿಮಾಧ್ಯಮಗಳ ಜವಾಬ್ದಾರಿ: ಲೇಖಕ ವಿಲಿಯಂ ಅನಿಸಿಕೆ

ಸಮಾಜದಲ್ಲಿ ಆತಂಕದ ವಾತಾವರಣ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:25 IST
Last Updated 18 ಮೇ 2022, 4:25 IST
ಸಾಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಲಾನ್ವೇಷಣೆ ಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಲೇಖಕ ವಿಲಿಯಂ ಬಿಡುಗಡೆ ಮಾಡಿದರು.
ಸಾಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಲಾನ್ವೇಷಣೆ ಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಲೇಖಕ ವಿಲಿಯಂ ಬಿಡುಗಡೆ ಮಾಡಿದರು.   

ಸಾಗರ: ಸಮಾಜದಲ್ಲಿ ಪರಸ್ಪರ ಅನುಮಾನ, ದ್ವೇಷ, ಹಿಂಸೆ ಹೆಚ್ಚುತ್ತಿರುವ ಇಂದಿನ ಆತಂಕದ ವಾತಾವರಣದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ ಎಂದು ಲೇಖಕ ವಿಲಿಯಂ ಹೇಳಿದರು.

ಇಲ್ಲಿನ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಲಾನ್ವೇಷಣೆ ಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪರಸ್ಪರ ದ್ವೇಷದಿಂದ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯವಿಲ್ಲ. ಸಹನೆ, ಪ್ರೀತಿಯಿಂದ ಮಾತ್ರ ಸಮಾಜದ ಎಲ್ಲಾ ವರ್ಗಗಳ ಜನರು ಸೌಹಾರ್ದಯುತವಾಗಿ ಬಾಳಲು ಸಾಧ್ಯ. ಮಾಧ್ಯಮಗಳು ಇಂತಹ ವಾತಾವರಣವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಸ್ಥಳೀಯ ಪತ್ರಿಕೆಗಳನ್ನು ನಡೆಸುವುದು ತಪಸ್ಸು ಇದ್ದಂತೆ. ಸ್ಥಳೀಯವಾಗಿ ನಡೆಯುವ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗೆ ಸಂಬಂಧಪಟ್ಟ ಚಟುವಟಿಕೆಯನ್ನು ಸಮಗ್ರವಾಗಿ ಹಿಡಿದಿಡಲು ಸ್ಥಳೀಯ ಪತ್ರಿಕೆಗಳಿಗೆ ಸಾಧ್ಯವಿದೆ. ಹೊಸ ಬರಹಗಾರರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲೂ ಈ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಸಾಮಾಜಿಕ ಕಾರ್ಯಕರ್ತ ಎನ್. ಶಿವಾನಂದ ಕುಗ್ವೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಾಮಚಂದ್ರ ಸಾಗರ, ಉಪನ್ಯಾಸಕಿ ವಂದಾ ಹೆಗಡೆ, ಕಲಾನ್ವೇಷಣೆ ಪತ್ರಿಕೆ ಸಂಪಾದಕ ಮೋಹನಮೂರ್ತಿ ಇದ್ದರು.

ಕುಗ್ವೆ ಗ್ರಾಮದ ಕಲಾವಿದರಾದ ಕೆ. ನಾರಾಯಣಪ್ಪ, ಕೆ.ಎಚ್. ಲಕ್ಷ್ಮಣ, ರಾಮಪ್ಪ ಬಾಗಿಲು, ಜನ್ನಹಕ್ಲು ರಾಜಪ್ಪ ಪ್ರಾರ್ಥಿಸಿದರು. ಕರ್ನಾಟಕ ಮುನ್ನಡೆ ಸಂಸ್ಥೆ ಅಧ್ಯಕ್ಷ ಸಿ.ಎ. ಶಂಕರ ಸ್ವಾಗತಿಸಿದರು. ಗಣಪತಿ ಬ್ಯಾಂಕ್ ಅಧ್ಯಕ್ಷ ವಿ. ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಫೆಡ್ರಿಕ್ ಸಲ್ಡಾನಾ ವಂದಿಸಿದರು. ಡಾ.ಆಶಾ ಜಿ.ಎಲ್. ನಿರೂಪಿಸಿದರು. ಕುಮುಟಾದ ವಿದ್ವಾನ್ ಗಿರೀಶ್ ಯಾಜಿ ಮತ್ತು ಸಂಗಡಿಗರಿಂದ ಸಂಗೀತ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.