ಶಿಕಾರಿಪುರ: ‘ಪುರಸಭೆ ವ್ಯಾಪ್ತಿಯ ಜಮೀನು ಭೂ ಪರಿವರ್ತನೆಗೆ ನಿರಪೇಕ್ಷಣ ಪತ್ರ ಕೊಡಲು ಪುರಸಭೆ ಮುಖ್ಯಾಧಿಕಾರಿಯು ನಿಕಟಪೂರ್ವ ಅಧ್ಯಕ್ಷರ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಅದರ ತನಿಖೆ ನಡೆಸಬೇಕು’ ಎಂದು ಪುರಸಭೆ ಸದಸ್ಯ ಗೋಣಿ ಪ್ರಕಾಶ್ ಗಂಭೀರವಾಗಿ ಆರೋಪಿಸಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
‘ಒಂದು ಎಕರೆ ಭೂ ಪರಿವರ್ತನೆಗೆ ₹ 4 ಲಕ್ಷದಂತೆ 19 ಎಕರೆಗೆ ₹ 70 ಲಕ್ಷದಿಂದ ₹ 80 ಲಕ್ಷದವರೆಗೆ ಹಣ ಪಡೆಯಲಾಗಿದೆ. ಆಡಳಿತ ಪಕ್ಷದ ಕೆಲ ಸದಸ್ಯರೂ ಈ ವ್ಯವಹಾರದಲ್ಲಿ ಇದ್ದಾರೆ. ಈ ಕುರಿತು ಅಧ್ಯಕ್ಷರು ತನಿಖೆಗೆ ಆದೇಶಿಸಬೇಕು. ಎಷ್ಟು ಎಕರೆ ಭೂಪರಿವರ್ತನೆಗೆ ನಿರಪೇಕ್ಷಣಾ ಪತ್ರ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖ್ಯಾಧಿಕಾರಿ ಭರತ್ ಮಾತನಾಡಿ, ‘ಅಕ್ರಮ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದರು. ಮುಖ್ಯಾಧಿಕಾರಿ ಗಮನಕ್ಕೆ ಬಾರದೆ ಭೂಪರಿವರ್ತನೆ ಆಗುತ್ತಿದೆಯೇ? ಹಾಗಾಗಲು ಸಾಧ್ಯವಿಲ್ಲ. ಮುಖ್ಯಾಧಿಕಾರಿ ಹಾರಿಕೆ ಉತ್ತರ ನೀಡಿ ಸಭೆಗೆ ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ನಾಮಿನಿ ಸದಸ್ಯ ಧಾರವಾಡ ಸುರೇಶ್, ಸದಸ್ಯ ರೋಷನ್ ಆರೋಪಿಸಿದರು. ‘ಭೂಪರಿವರ್ತನೆ ನಿಯಮಾನುಸಾರ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಕೂಲಂಕಷ ಮಾಹಿತಿ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸದಸ್ಯ ನಾಗರಾಜಗೌಡ ಮಾತನಾಡಿ, ‘ಹೌಸಿಂಗ್ ಬೋರ್ಡ್ ಪ್ರದೇಶದ ರಸ್ತೆಗಳು ಗುಂಡಿ ಬಿದ್ದಿವೆ. ಚರಂಡಿ ವ್ಯವಸ್ಥೆ ಹಾಳಾಗಿದೆ. ಬೀದಿ ದೀಪ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇಷ್ಟೊಂದು ನ್ಯೂನತೆ ಇದ್ದರೂ ಕಡಿಮೆ ಅಭಿವೃದ್ಧಿ ಶುಲ್ಕ ಪಡೆದು ಪುರಸಭೆಗೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಉತ್ತರಿಸಬೇಕು’ ಎಂದರು.
ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ‘ಪುರಸಭೆ ವಾಣಿಜ್ಯ ಮಳಿಗೆ ಹರಾಜು ಮಾಡದೆ ಖಾಲಿ ಉಳಿದಿದ್ದು, ಕೂಡಲೇ ಹರಾಜು ನಡೆಸಬೇಕು’ ಎಂದು ಒತ್ತಾಯಿಸಿದರು. ‘ಹರಾಜು ಪ್ರಕ್ರಿಯೆ ಶೀಘ್ರ ನಡೆಸಲಾಗುವುದು. ಇನ್ನು ಕೆಲವು ಕಡೆ ಹಳೆ ಬಿಡ್‌ದಾರರನ್ನೇ ಮುಂದುವರಿಸಲಾಗುವುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಎ’ ಖಾತೆ, ‘ಬಿ’ ಖಾತೆ ವಿತರಣೆ ಸಂದರ್ಭದಲ್ಲಿ ಹಲವು ನ್ಯೂನತೆ ಅಗಿವೆ. ಅವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರಿಗೆ ಆಗ ಬನ್ನಿ ಈಗ ಬನ್ನಿ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದು, ಅದಕ್ಕೆ ಕಾರಣರಾಗಿರುವ ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸುರೇಶ್ ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ ಬಾಳೆಕಾಯಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಸದಸ್ಯರು, ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.