ಶಿವಮೊಗ್ಗ: ‘ಭಾರತೀಯ ಪಶು ವೈದ್ಯಕೀಯ ಪರಿಷತ್‌ನಿಂದ ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ಮಾನ್ಯತೆ ನವೀಕರಣಕ್ಕೆ ₹22.44 ಕೋಟಿ ಮೊತ್ತದ ಕಾಮಗಾರಿಗಳ ಪ್ರಸ್ತಾವ ಸಲ್ಲಿಸಿದೆ. ಅದನ್ನು ಸಿಎಂ ಸಿದ್ದರಾಮಯ್ಯ ಮುಂದಿಟ್ಟು ಅವರ ಗಮನ ಸೆಳೆಯಲು ಸಭೆ ನಡೆಸಲು ಶೀಘ್ರ ದಿನಾಂಕ ನಿಗದಿಗೊಳಿಸಲಾಗುವುದು’ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಇಲ್ಲಿನ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯ 173 ಎಕರೆ ವಿಸ್ತೀರ್ಣವಿದ್ದು, ಈ ಕಾಲೇಜಿಗೆ 2016ರ ಎಂಎಸ್‌ವಿಇ ನಿಯಮದ (ಮಿನಿಮಮ್ ಸ್ಟ್ಯಾಂಡರ್ಡ್ಸ್ ಆಫ್ ವೆಟರ್ನರಿ ಎಜುಕೇಷನ್) ಪ್ರಕಾರ ಭಾರತೀಯ ಪಶುವೈದ್ಯಕೀಯ ಪರಿಷತ್‌ನಿಂದ ಮಾನ್ಯತೆಯ ನವೀಕರಣಕ್ಕೆ ಕಾಮಗಾರಿಗಳನ್ನು ಕೈಗೊಳ್ಳುವ ಅವಶ್ಯವಿದೆ. ಆ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದರು.
ಬೀದರ್‌ನ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ. ವೀರಣ್ಣ ಮಾತನಾಡಿ, ‘ಇತ್ತೀಚೆಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಕ್ರಿಡಿಟೇಷನ್ ಸಮಿತಿಯವರು ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ರಾಜ್ಯದ ಎರಡನೇ ಅತ್ಯುತ್ತಮ ಕಾಲೇಜು ಎಂದು ಗುರುತಿಸಿದ್ದಾರೆ. ಬಾಕಿ ಕಾಮಗಾರಿ ಆದಷ್ಟು ಬೇಗ ಮುಗಿಸಿ ಕಾಲೇಜನ್ನು ಇನ್ನೂ ಉತ್ತಮ ಮಟ್ಟಕ್ಕೆ ಬೆಳೆಸಲು ಸಲಹೆ ನೀಡಿದ್ದಾರೆ’ ಎಂದು ತಿಳಿಸಿದರು.
‘ಆವರಣದಲ್ಲಿ ಅಪೂರ್ಣವಾಗಿರುವ ಕಟ್ಟಡಗಳು ಹಳೆಯದಾಗಿದ್ದು, ತುರ್ತಾಗಿ ಕಾಮಗಾರಿ ಕೈಗೊಂಡು ಈ ಕಟ್ಟಡಗಳನ್ನು ಪೂರ್ಣಗೊಳಿಸಬೇಕಿದೆ. ಶೀಘ್ರ ಹಣ ಬಿಡುಗಡೆ ಮಾಡಿಬೇಕು’ ಎಂದು ಮನವಿ ಮಾಡಿದರು.
‘ಮಹಾವಿದ್ಯಾಲಯದ ಆವರಣದೊಳಗೆ 2,500 ಮೀಟರ್ ಆಂತರಿಕ ರಸ್ತೆ ಆಗಬೇಕಿದೆ. ರೈತರು ಮತ್ತು ಜಾನುವಾರುಗಳು ಓಡಾಡುವುದರಿಂದ ಈ ರಸ್ತೆ ಅಗತ್ಯವಾಗಿ ಬೇಕಾಗಿದೆ. ಪ್ರಯೋಗಾಲಯದ ಪರಿಕರಗಳ ಮೇಲ್ದರ್ಜೆಗೇರಿಸಲು ₹25 ಕೋಟಿ ಹಣದ ಅವಶ್ಯಕತೆ ಇದೆ’ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ‘ಕಾಲೇಜಿನ ಮೂಲ ಸೌಕರ್ಯ ಮತ್ತು ಇತರೆ ಕಾಮಗಾರಿಗಳ ಕುರಿತು ಸಚಿವರು ವೈಯಕ್ತಿಕ ಆಸಕ್ತಿ ತೆಗೆದುಕೊಂಡು ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.