
ಶಿವಮೊಗ್ಗ: ಇಲ್ಲಿನ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಮಹಿಳೆಯರಿಗೆ ಸಿರಿಧಾನ್ಯಗಳಿಂದ ತಿನಿಸು ತಯಾರಿಕೆ ಸ್ಪರ್ಧೆ ಆಯೋಜಿಸಲಾಗಿತ್ತು. ಶಿವಮೊಗ್ಗ ಮಾತ್ರವಲ್ಲ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸಿರಿಧಾನ್ಯಗಳಿಂದ ಐಸ್ ಕ್ರೀಮ್, ಕಡುಬು, ತಂಬಿಟ್ಟು, ಚಟ್ನಿ, ಬರ್ಫಿ, ಚಾಟ್ಸ್ ನಂತಹ ಜನಪ್ರಿಯ ಖಾದ್ಯಗಳೊಂದಿಗೆ ಮರೆತುಹೋದ ಖಾದ್ಯಗಳು ಅಲ್ಲಿ ಜೀವ ಪಡೆದಿದ್ದವು.
28 ಮಹಿಳೆಯರು ಒಟ್ಟು 56 ಬಗೆಯ ಖಾದ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಬೇಕರಿಗಳಲ್ಲಿ ಸಿಗುವ ಎಲ್ಲ ರೀತಿಯ ಸಿಹಿ ಮತ್ತು ಖಾರದ ಖಾದ್ಯಗಳನ್ನು ಸಿರಿಧಾನ್ಯಗಳಲ್ಲಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು.
ನವಣೆ ಐಸ್ ಕ್ರೀಮ್, ರಾಗಿ ಐಸ್‌ಕ್ರೀಮ್, ಕಾಳು ಮೆಣಸು ಗೊಜ್ಜು, ತೊಡೆಸೆವು ಅಂಗು, ಮೆಂತೆ ಪೂರಿ, ಕಾಯಿ ಕಡುಬು, ಚೀನಿ ಕಾಯಿ ಶಾವಿಗೆ, ನವಣೆ ಪಲಾವ್, ರಾಗಿ ತಂಬಿಟ್ಟು, ಕುರೆಶಾಣಿ ಚಟ್ನ, ರಾಗಿ ಶಾವಿಗೆ, ರಾಗಿ ಒತ್ತು ಶಾವಿಗೆ ಬಾತ್, ಕುಚುಲಕ್ಕಿಯ ಬಿಸಿನೀರು ಕಡುಬು, ನವಣೆ ಕಜ್ಜಾಯ, ನವಣೆ ಕಿಲ್ಸ, ಬರ್ಗ ಉಪ್ಪಿಟ್ಟು, ಎಲ್ಲರೀತಿ ಸಿರಿಧಾನ್ಯ ಕಾಳಿಂದ ಜುಣ್ಕ(ಜುನ್ಕಿ), ಲಾಡು, ಅಕ್ಕಚ್ಚು ಜ್ಯೂಸ್, ಸಿರಿಧಾನ್ಯ ಬೆಣ್ಣೆ ಮುರುಕು, ಸಿಹಿಕುಂಬಳ ಗಾರ್ಗೆ, ಸಾವೆಅಕ್ಕಿ ಬುತ್ತಿ, ಸಾಣಿಗೆ ಹುಗ್ಗಿ, ಸಿಹಿಗೆಣಸು ಹೋಳಿಗೆ, ಸಿರಿಧಾನ್ಯದ ಪುಟ್ಟು, ಎಳ್ಳುಂಡೆ, ಸಿರಿಧಾನ್ಯ ಸಾಮೆ ಬರ್ಫಿ, ನವಣೆ ಚಾಟ್ಸ್, ನವಣೆ ಸೌತೆ ಬೀಜ ಗೌಲಿ ಪಾಯಸ, ನವಣೆ ಬೆಲ್ಲದ ಕುಕೀಸ್, ಸೌತೆಕಾಯಿ ಕಡುಬು, ಬಾಳೆ ದಿಂಡಿನ ಜೆಲ್ಲಿ, ನವಣೆ ಬರ್ಫಿ ಸೇರಿದಂತೆ ಅನೇಕ ಬಗೆಯ ಖಾದ್ಯ ಅಲ್ಲಿ ಸಿದ್ಧವಾಗಿದ್ದವು.
ಇಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಪ್ರಥಮ ಸ್ಥಾನ ಪಡೆದವರಿಗೆ ₹ 5,000, ದ್ವಿತೀಯ ₹ 3,000 ಮತ್ತು ತೃತೀಯ ₹ 2,000 ಬಹುಮಾನ ವಿತರಿಸಲಾಯಿತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್‌ಕುಮಾರ್, ಉಪ ನಿರ್ದೇಶಕ ಕೆ.ಆರ್.ಲೋಕೇಶ್, ಉಪನಿರ್ದೇಶಕಿ ಮಂಜುಳಾ, ಸಹಾಯಕ ನಿರ್ದೇಶಕರಾದ ಕಾಶೀನಾಥ್, ರಶ್ಮಿ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.