ADVERTISEMENT

ಅನಿವಾಸಿ ಕನ್ನಡಿಗರ ನೆರವಿಗೆ ಸಚಿವಾಲಯ: ಡಾ. ಆರತಿ ಕೃಷ್ಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 14:20 IST
Last Updated 9 ಮಾರ್ಚ್ 2024, 14:20 IST
ಡಾ.ಆರತಿ ಕೃಷ್ಣ
ಡಾ.ಆರತಿ ಕೃಷ್ಣ   

ಶಿವಮೊಗ್ಗ: ಅನಿವಾಸಿ ಕನ್ನಡಿಗರ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರೋದ್ಯಮ ಸೇರಿದಂತೆ ನಾನಾ ಕಾರಣಕ್ಕೆ ಇವತ್ತು ಸಾಕಷ್ಟು ಮಂದಿ ಕನ್ನಡಿಗರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ. ಅವರ ರಕ್ಷಣೆಗೆ ಸಚಿವಾಲಯ ನೆರವಾಗಲಿದೆ ಎಂದರು.

ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಅನಿವಾಸಿಗಳ ಭದ್ರತೆ ದೃಷ್ಟಿಯಿಂದ ಪ್ರತ್ಯೇಕ ಸಚಿವಾಲ ಆರಂಭಿಸಿವೆ. ಹೊರ ದೇಶಗಳಿಗೆ ಹೊರಟವರು ಸಚಿವಾಲಯಕ್ಕೆ ಅವರ ಮಾಹಿತಿ ನೀಡಬೇಕು. ಅಂತಹದ್ದೇ ವ್ಯವಸ್ಥೆ ರಾಜ್ಯದಲ್ಲೂ ಶುರುವಾದರೆ, ಯಾರು ಎಲ್ಲಿಗೆ ಹೋದರೂ ಸಂಪೂರ್ಣ ಮಾಹಿತಿ ಸರ್ಕಾರದ ಮಟ್ಟದಲ್ಲಿಯೇ ಲಭ್ಯವಾಗಿರುತ್ತದೆ. ಅದರಿಂದ ಯಾರೇ ಹೊರದೇಶಕ್ಕೆ ಹೋಗಿ, ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದಾಗ ಅವರ ನೆರವಿಗೆ ಸಾಧ್ಯವಾಗುತ್ತದೆ ಎಂದರು.

ADVERTISEMENT

ವಿದೇಶಗಳಲ್ಲಿ ಕೆಲಸಕ್ಕಾಗಿ ಕನ್ನಡಿಗರಿಗೆ ಆಮಿಷ ತೋರಿಸಲಾಗುತ್ತಿದೆ. ಸೆಕ್ಯೂರಿಟಿ ಕೆಲಸ ಎಂದು ಹೇಳಿ ಸೈನ್ಯಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲ. ಹಾಗೆಯೇ ಡಾಟಾ ಎಂಟ್ರಿ ಆಪರೇಟರ್ ಎಂದು ಹೇಳಿ ಹಲವು ಅಕ್ರಮ ಕೆಲಸಗಳ ಕೂಡ ಮಾಡಿಸುತ್ತಿದ್ದಾರೆ. ಹಾಗಾಗಿ ಕನ್ನಡಿಗರು ಮೋಸ ಹೋಗುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ನಕಲಿ ಏಜೆನ್ಸಿಗಳ ಬಗ್ಗೆ ಎಚ್ಚರವಿರಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದೆ. ಎಲ್ಲಾ ಗ್ಯಾರಂಟಿಗಳು ಬಡವರ ತಲುಪುತ್ತಿವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಭರವಸೆ ಸಿಗಲಿದೆ. ಕೇಂದ್ರ ಸಚಿವಾಲಯದಲ್ಲಿರುವ 10 ಲಕ್ಷ ಹುದ್ದೆಗಳನ್ನು ಕಾಂಗ್ರೆಸ್ ಪಕ್ಷ ತುಂಬಲಿದೆ ಎಂದರು.


ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಆಫ್ರೀದಿ, ಮಂಜುನಾಥ್ ಬಾಬು, ಚಂದನ್, ಪದ್ಮನಾಭ್, ಕೃಷ್ಣಪ್ಪ, ಶಿ.ಜು. ಪಾಶ ಇದ್ದರು.

ಶಿವಮೊಗ್ಗ ಕ್ಷೇತ್ರಕ್ಕೆ ಗೀತಾ ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ
ಡಾ. ಆರತಿ ಕೃಷ್ಣ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ
ಹಕ್ಕಿಪಿಕ್ಕಿ ಜನರ ನೆರವಿಗೂ ಅವಕಾಶ
ಹಕ್ಕಿಪಿಕ್ಕಿ ಜನಾಂಗದವರು ಕಾಂಬೋಡಿಯಾ ವಿಯೆಟ್ನಾಂ ದೇಶಗಳಿಗೆ ಹೋಗಿ ಅಲ್ಲಿ ತಮ್ಮ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಸಾಕಷ್ಟು ಜನರು ನಕಲಿ ಏಜೆನ್ಸಿ ಮೂಲಕ ಅಲ್ಲಿಗೆ ಹೋಗಿ ತೊಂದರೆ ಅನುಭವಿಸುವಂತಹ ಘಟನೆಗಳು ನಡೆದಿವೆ. ಹಾಗಾಗಿ ಯಾರೇ ಹೊರ ದೇಶಗಳಿಗೆ ಹೋಗುವುದಾದರೆ ಅವರ ವಿವರ ಸರ್ಕಾರದ ಬಳಿಯೂ ಇರಲಿ ಎನ್ನುವ ಕಾರಣಕ್ಕೆ ಪ್ರತ್ಯೇಕ ಸಚಿವಾಲಯ ಇರಲಿದೆ ಎಂದು ಡಾ.ಆರತಿ ಕೃಷ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.