ಶಿವಮೊಗ್ಗ: ‘ಆಧುನಿಕತೆಯ ಭರಾಟೆಗೆ ಸಿಲುಕಿ ಹದಿಹರೆಯದ ಮನಸ್ಸು ಸಂಪೂರ್ಣ ಕಲುಷಿತಗೊಳ್ಳುತ್ತಿದೆ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಘ, ಕ್ರೀಡಾ ವೇದಿಕೆ, ಎನ್.ಎಸ್.ಎಸ್ ಘಟಕಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ರಂಗದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳದವರು, ಇನ್ನೊಬ್ಬರಿಗೆ ಎಂದಿಗೂ ಕಲಿಸಲಾರರು. ಭವಿಷ್ಯದ ಜನಾಂಗವನ್ನು ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಂದೆಯ ಪಾದ ಸ್ಪರ್ಶ ಮಾಡಿದವನಿಗೆ ಸಂಪತ್ತಿನ ಬರವಿಲ್ಲ. ತಾಯಿಯ ಪಾದ ಸ್ಪರ್ಶ ಮಾಡಿದವನಿಗೆ ಮಮತೆಯ ಕೊರತೆಯಿಲ್ಲ. ಅಣ್ಣನ ಆಶೀರ್ವಾದದಿಂದ ಶಕ್ತಿಯ ಕೊರತೆಯಿಲ್ಲ. ಅದೇ ರೀತಿ ಗುರುವಿನ ಪಾದ ಸ್ಪರ್ಶ ಮಾಡಿದಾತ ಎಂದಿಗೂ ವಿದ್ಯಾಹೀನನಾಗುವುದಿಲ್ಲ’ ಎಂದು ಹೇಳಿದರು.
‘ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗುವುದಿಲ್ಲ. ಮಕ್ಕಳನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ತಾಯಿಯ ಪಾತ್ರ ದೊಡ್ಡದು. ಎಂತಹ ಸವಾಲುಗಳನ್ನೂ ಎದುರಿಸುವ ಶಕ್ತಿಯನ್ನು ಮಹಿಳೆಯರು ಹೊಂದಿದ್ದಾರೆ. ಸಂಸ್ಕಾರಕ್ಕೆ ಮತ್ತೊಂದು ಹೆಸರೆ ಸ್ತ್ರೀ’ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ‘ಸತತ ಅಭ್ಯಾಸದಿಂದ ಮಾತ್ರ ಯಾವುದೇ ವಿಷಯದಲ್ಲಿ ವಿದ್ವತ್ ಪಡೆಯಲು ಸಾಧ್ಯ. ಕಂಠಪಾಠದ ಕಲಿಕೆಗಿಂತ, ವಿಷಯಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ’ ಎಂದರು.
ಸುಬ್ಬಯ್ಯ ಸಮೂಹ ಸಂಸ್ಥೆ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ವಿನಯ ಶ್ರೀನಿವಾಸ ಮಾತನಾಡಿ, ‘ನಮ್ಮ ಸಮಗ್ರ ಜೀವನಕ್ಕೆ ವಿದ್ಯಾರ್ಥಿ ಜೀವನ ಅವಲಂಬಿತವಾಗಿದೆ. ಪರಿಶ್ರಮದ ಜೊತೆಗೆ ಚಾಕಚಕ್ಯತೆ ರೂಢಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಅನನ್ಯಾ, ಕಾರ್ಯದರ್ಶಿ ನಂದಿತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.