ADVERTISEMENT

ಆರಿದ್ರೆಯ ಆರ್ಭಟ, ಮೈದುಂಬಿದ ತುಂಗೆ

ಶಿವಮೊಗ್ಗ ನಗರ: ಮುಕ್ಕಾಲು ಭಾಗ ಮುಳುಗಿದ ನದಿ ತಟದ ಮಂಟಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 3:59 IST
Last Updated 5 ಜುಲೈ 2022, 3:59 IST
ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಹಾಗೂ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ತುಂಗಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನಗರದ ತುಂಗಾ ನದಿ ಸೇತುವೆ ಸೋಮವಾರ ಕಂಡು ಬಂದ ದೃಶ್ಯಚಿತ್ರ: ಶಿವಮೊಗ್ಗ ನಾಗರಾಜ್
ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಹಾಗೂ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ತುಂಗಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನಗರದ ತುಂಗಾ ನದಿ ಸೇತುವೆ ಸೋಮವಾರ ಕಂಡು ಬಂದ ದೃಶ್ಯಚಿತ್ರ: ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಲೆನಾಡು ಸೇರಿದಂತೆ ಜಿಲ್ಲೆಯ ಹಲವು ಕಡೆ ಧಾರಾಕಾರ ಮಳೆಯಾಗಿದೆ. ಕೆರೆ, ಕಟ್ಟೆ, ಹಳ್ಳಕೊಳ್ಳ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ಆರಿದ್ರ ಮಳೆಯ ಆರ್ಭಟದಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ‌ ಹೆಚ್ಚಾಗಿದೆ. ಅದರಂತೆ ನಗರದ ಕೋರ್ಪಳಯ್ಯ ಛತ್ರ ಹಿಂಭಾಗದಲ್ಲಿರುವ ನದಿಯ ಮಂಟಪ ಮುಕ್ಕಾಲು ಭಾಗ ಮುಳುಗಿದೆ. ಶನಿವಾರ ನದಿಗೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ಭಾನುವಾರ ರಾತ್ರಿಯ ಹೊತ್ತಿಗೆ 22.900 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸೋಮವಾರ ಬೆಳಿಗ್ಗೆ ಹೊತ್ತಿಗೆ ಒಳಹರಿವು ತಗ್ಗಿದರೂ ಸಹ ನಗರದಲ್ಲಿ ನದಿಯ ಮಂಟಪ ಮುಕ್ಕಾಲು ಭಾಗ ತುಂಬಿದೆ. ಪ್ರಸ್ತುತ ನದಿಗೆ 17,910 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದರಿಂದ ತುಂಗೆ ಮೈದುಂಬಿ ಹರಿಯುತ್ತಿದೆ.

ಹದ ಮಳೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಮತ್ತಷ್ಟು ಬಿರುಸುಗೊಂಡಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಮುಂಗಾರು ಆರಂಭವಾಗಿದ್ದರೂ ಜೂನ್ ತಿಂಗಳಲ್ಲಿ ಮಳೆಯ ಕೊರತೆ ಆಗಿತ್ತು. ಜಿಲ್ಲೆಯ ಅರೆ ಮಲೆನಾಡು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯದಿಂದ ಭರದಿಂದ ಸಾಗಿದ್ದರೂ ಮಳೆ ಇಲ್ಲದೇ ಬೀಜ ಮೊಳಕೆಯೊಡೆದಿರಲಿಲ್ಲ. ಸಾವಿರಾರು ರೈತರು ಬಿತ್ತಿರುವುದನ್ನು ಅಳಿಸಿ ಮತ್ತೆ ಬಿತ್ತನೆ ಮಾಡಿದ್ದರು. ಇದೀಗ ಮಳೆಯ ಆಗಮನದಿಂದ ತುಸು ನೆಮ್ಮದಿ ತಂದಿದೆ.

ADVERTISEMENT

ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ನೀರು ಹರಿಯಬಿಡಲಾಗುತ್ತಿದೆ.

ಸಾಗರ: 8.56 ಸೆಂ.ಮೀ ಮಳೆ ದಾಖಲು
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 4.1 ಸೆಂ.ಮೀ ಮಳೆ ದಾಖಲಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 2.17 ಸೆಂ.ಮೀ, ಭದ್ರಾವತಿ 1.37, ತೀರ್ಥಹಳ್ಳಿ 4.89, ಸಾಗರ 8.56, ಶಿಕಾರಿಪುರ 1.94, ಸೊರಬ 3.52 ಹಾಗೂ ಹೊಸನಗರ ತಾಲ್ಲೂಕಿನಲ್ಲಿ 6.43 ಸೆಂ.ಮೀ ಮಳೆಯಾಗಿದೆ.

ಭದ್ರಾ ಜಲಾಶಯ: ನಾಲ್ಕು ದಿನ, 3 ಅಡಿ ಹೆಚ್ಚಳ
ಶಿವಮೊಗ್ಗ
: ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ನದಿ ಪಾತ್ರದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ಜುಲೈ ತಿಂಗಳ ಮೊದಲ ನಾಲ್ಕು ದಿನಗಳಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ಮೂರು ಅಡಿಯಷ್ಟು ಹೆಚ್ಚಳಗೊಂಡಿದೆ.

ಆರಿದ್ರೆಯ ಆರ್ಭಟದ ಫಲವಾಗಿ ಜುಲೈ 1ರಿಂದ 4ರವರೆಗೆ ಭದ್ರಾ ಜಲಾಶಯಕ್ಕೆ 33,964 ಕ್ಯುಸೆಕ್ ನೀರು ಹರಿದುಬಂದಿದೆ. ಜುಲೈ 1ರಂದು 3717 ಕ್ಯುಸೆಕ್ ಇದ್ದ ಒಳಹರಿವಿನ ಪ್ರಮಾಣ, ಸೋಮವಾರ 13405 ಕ್ಯುಸೆಕ್‌ಗೆ ಹೆಚ್ಚಳಗೊಂಡಿತ್ತು. ಭದ್ರ ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಇದ್ದು, ಜಲಾಶಯದಲ್ಲಿ್ ಶುಕ್ರವಾರ 152.6 1/2 ಅಡಿ ಇದ್ದ ನೀರಿನ ಪ್ರಮಾಣ ಸೋಮವಾರ 155.7 ಅಡಿಗೆ ಏರಿಕೆಯಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗಾಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ನೀರಿನ ಮಟ್ಟ 165 ಅಡಿಗೆ ಹೆಚ್ಚಳವಾಗಬೇಕಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭದ್ರೆ ಮೈದುಂಬುವುದನ್ನು ಕಾಣಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.