
ಸಾಗರ: ಶಿಕ್ಷಣವನ್ನು ದೇಶ ಕಟ್ಟಲು ಬಳಸಬಹುದು. ಅದೇ ರೀತಿ ದೇಶದ ನಾಶಕ್ಕೂ ಬಳಸಬಹುದು ಎಂಬುದಕ್ಕೆ ಈಚೆಗೆ ಹೆಚ್ಚುತ್ತಿರುವ ವೈಟ್ ಕಾಲರ್ ಭಯೋತ್ಪಾದನೆ ಉತ್ತಮ ಉದಾಹರಣೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾವಂತರೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆ ಎಂಬುದು ಮೌಲ್ಯಯುತ ಗುಣಗಳನ್ನು ಬೆಳೆಸುವ ಮೂಲಕ ವ್ಯಕ್ತಿತ್ವಗಳನ್ನು ರೂಪಿಸುವ ಜ್ಞಾನ ದೇಗುಲಗಳಿದ್ದಂತೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕ ಗಳಿಸುವ ಜೊತೆಗೆ ಈ ಕಾಲಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯ ನಡುವೆಯೂ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಪೈಪೋಟಿ ಇರುವುದು ಸಕಾರಾತ್ಮಕ ಸಂಗತಿಯಾಗಿದೆ. ಇಲ್ಲಿನ ಉಪನ್ಯಾಸಕರಲ್ಲಿ ಗುಂಪುಗಾರಿಕೆ ಇಲ್ಲದಿರುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಹೇಳಿದರು.
ಪ್ರಶ್ನೆ ಕೇಳುವ ಗುಣವನ್ನು, ಸಾಮಾಜಿಕ ಬದ್ದತೆಯನ್ನು ಕಲಿಸಿದ್ದು, ಈ ಕಾಲೇಜಿನ ಹೆಗ್ಗಳಿಕೆಯಾಗಿದೆ. ನನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಈ ಕಾಲೇಜಿನ ಕೊಡುಗೆ ಮಹತ್ವದ್ದಾಗಿದೆ ಎಂದು ಚಿತ್ರನಟ ಅರುಣ್ ಸಾಗರ್ ಹೇಳಿದರು.
ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ನಾನೀಗ ಶಾಸಕನಾಗಿ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ. ಸರ್ಕಾರ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಒತ್ತು ನೀಡಿದರೆ ಉಳಿದ ಕ್ಷೇತ್ರಗಳ ಅಭಿವೃದ್ಧಿ ತಾನಾಗಿಯೆ ಆಗುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ ಎಸ್.ಗುಂಡಪಲ್ಲಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ, ಸದಸ್ಯರಾದ ಉಮೇಶ್, ಲೋಕೇಶ್, ಭವ್ಯ, ಸಲೀಂ ಯೂಸೂಫ್, ಪ್ರಮುಖರಾದ ಸರ್ಫ್ರಾಜ್ ಚಂದ್ರಗುತ್ತಿ, ಸಂತೋಷ್ ಕುಮಾರ್ ಎನ್. ಇದ್ದರು.
ಸಾನ್ವಿ ಜಿ.ಭಟ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪರಮೇಶ್ವರಪ್ಪ ಜಿ. ಸ್ವಾಗತಿಸಿದರು. ಪ್ರಾಂಶುಪಾಲ ಸತ್ಯನಾರಾಯಣ ಕೆ.ಸಿ.ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಗಾರಪ್ಪ ಎಂ. ವಂದಿಸಿದರು. ಎಲ್.ಎಂ.ಹೆಗಡೆ ನಿರೂಪಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ರಾಜ್ಯದ ಏಕೈಕ ಕಾಲೇಜು ಇಲ್ಲಿನದ್ದು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಮೂರು ಅಂತಸ್ತು ಹೊಂದಿರುವ ಇಲ್ಲಿನ ಕಾಲೇಜಿನ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಕಲ್ಪಿಸಲು ಸಂಸದರ ನಿಧಿಯಿಂದ ₹ 20 ಲಕ್ಷ ನೆರವು ನೀಡಲಾಗುವುದು.ಬಿ.ವೈ.ರಾಘವೇಂದ್ರ, ಸಂಸದರು.
ಶಿಕ್ಷಣದ ಜೊತೆಗೆ ಜನರನ್ನು ಪ್ರೀತಿಸಲು ಕಲಿಸಿದ್ದು ಈ ಕಾಲೇಜಿನ ವಿಶೇಷತೆಯಾಗಿದೆ. ಶಿಕ್ಷಣ ಎಂಬುದು ಕೇವಲ ದುಡಿಮೆಗಾಗಿ ಇರುವುದಲ್ಲ ಬದಲಾಗಿ ಅದೊಂದು ಜವಾಬ್ಧಾರಿಯನ್ನು ನಿರ್ವಹಿಸುವ ಮಾಧ್ಯಮ ಎನ್ನುವುದನ್ನು ಇಲ್ಲಿನ ಉಪನ್ಯಾಸಕರು ಕಲಿಸಿಕೊಟ್ಟಿದ್ದಾರೆ.ಅರುಣ್ ಸಾಗರ್, ಚಿತ್ರನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.