ADVERTISEMENT

ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಸುಳ್ಳು ಲೆಕ್ಕದ ಆರೋಪ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 7:31 IST
Last Updated 23 ಆಗಸ್ಟ್ 2025, 7:31 IST
ಸಾಗರದಲ್ಲಿ ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆ ನಡೆಯಿತು.
ಸಾಗರದಲ್ಲಿ ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆ ನಡೆಯಿತು.   

ಸಾಗರ: ‘ನಗರದ ಸ್ವಚ್ಛತೆ ಕಾರ್ಯ ನಡೆಸುವ ಸಿಬ್ಬಂದಿ ವಿಷಯದಲ್ಲಿ ಸುಳ್ಳು ಲೆಕ್ಕ ತೋರಿಸಿ ಬಿಲ್ ಪಡೆಯಲಾಗುತ್ತಿದೆ’ ಎಂದು ನಗರಸಭೆಯ ಸದಸ್ಯರೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ಫೋನ್ ಮಾಡಿ ದೂರಿದ್ದಾರೆ’ ಎಂಬ ವಿಷಯ ಶುಕ್ರವಾರ ನಡೆದ ಇಲ್ಲಿನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

‘ಸ್ವಚ್ಛತೆ ವಿಷಯದಲ್ಲಿ ಶ್ರಮ ವಹಿಸಿ ಕೆಲಸ ನಿರ್ವಹಿಸಲಾಗುತ್ತಿದೆ. ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ನಮ್ಮ ನಗರದ ಸ್ವಚ್ಛತೆ ಎಷ್ಟೋ ವಾಸಿ ಎನ್ನುವಂತಿದೆ. ಆದಾಗ್ಯೂ ನಮ್ಮ ಕಚೇರಿ ವಿರುದ್ ಆರೋಪ ಮಾಡುತ್ತಿರುವುದು ಬೇಸರ ತಂದಿದೆ’ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.

‘ನಮ್ಮ ಮೇಲೆ ನಂಬಿಕೆ ಇಲ್ಲದಿದ್ದರೆ ನಿಮಗೆ ಬೇಕಾದ ಪೌರಾಯುಕ್ತರನ್ನು ನೇಮಕ ಮಾಡಿಕೊಳ್ಳಿ. ಸುಳ್ಳು ದಾಖಲೆ ಸೃಷ್ಟಿಸಿ ಬಿಲ್ ಪಡೆದಿರುವ ಒಂದು ಉದಾಹರಣೆ ತೋರಿಸಿ’ ಎಂದು ಅವರು ಭಾವೋದ್ವೇಗಕ್ಕೆ ಒಳಗಾಗಿ ಸವಾಲು ಹಾಕಿದರು.

ADVERTISEMENT

‘ಪೌರಾಯುಕ್ತ ನಾಗಪ್ಪ ಅವರಿಗೆ ಊರಿನ ಬಗ್ಗೆ ಇರುವ ಕಳಕಳಿಯ ಬಗ್ಗೆ ಸಂಶಯ ಬೇಡ. ಕೆಲವೊಂದು ಸಂದರ್ಭಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ. ಇಂತಹ ವೇಳೆ ನಗರಸಭೆಯ ಸಭೆಗಳಲ್ಲೇ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಜಿಲ್ಲಾಧಿಕಾರಿ ಕಚೇರಿಗೆ ಒಯ್ಯುವುದು ಸರಿಯಲ್ಲ’ ಎಂದು ಆಡಳಿತಾರೂಢ ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಹೇಳಿದರು.

‘ಸ್ವಚ್ಛತೆ ಸಿಬ್ಬಂದಿ ಕೊರತೆ ಎದುರಾದಾಗ ಪೌರಾಯುಕ್ತರು ಆನವಟ್ಟಿ, ತ್ಯಾಗರ್ತಿ ಭಾಗದಿಂದ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ವಿರುದ್ಧ ದೂರುವುದು ಸರಿಯಾದ ಕ್ರಮವಲ್ಲ’ ಎಂದು ಬಿಜೆಪಿ ಸದಸ್ಯೆ ಮಧುರಾ ಶಿವಾನಂದ್ ಅಭಿಪ್ರಾಯಪಟ್ಟರು.

‘ನಗರವ್ಯಾಪ್ತಿಯಲ್ಲಿ ಅಳವಡಿಕೆಯಾಗುತ್ತಿರುವ ಫ್ಲೆಕ್ಸ್‌ಗಳನ್ನು ಕಾರ್ಯಕ್ರಮ ಮುಗಿದ ನಂತರ ತೆರವುಗೊಳಿಸುವ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎನ್ನುವುದರ ಕುರಿತು ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

‘ಕಳೆದ ತಿಂಗಳು ಸಿಗಂದೂರಿನಲ್ಲಿ ನಡೆದ ಸೇತುವೆ ಉದ್ಘಾಟನೆ ಕಾರ್ಯಕ್ರಮದ ವೇಳೆ ರಾಜಕೀಯ ಮುಖಂಡರಿಗೆ ಸ್ವಾಗತ ಕೋರಿ ಅಳವಡಿಸಿದ್ದ ಫ್ಲೆಕ್ಸ್ ಅನ್ನು ರಾತ್ರಿ ಬೆಳಗಾಗುವುದರೊಳಗೆ ತೆಗೆಯಲಾಗಿದೆ. ಆದರೆ, ಕೆಲವು ರಾಜಕೀಯ ಮುಖಂಡರ ಫ್ಲೆಕ್ಸ್‌ಗಳನ್ನು ಕಾರ್ಯಕ್ರಮ ಮುಗಿದು ಎರಡು ಮೂರು ತಿಂಗಳಾದರೂ ತೆಗೆಯುವುದಿಲ್ಲ’ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಫ್ಲೆಕ್ಸ್ ವಿಚಾರದಲ್ಲಿ ನಗರಸಭೆ ಸಿಬ್ಬಂದಿ ಸರಿಯಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಕಾರ್ಯಕ್ರಮ ಮುಗಿದ ನಂತರವೂ ಫ್ಲೆಕ್ಸ್ ಇರಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ’ ಎಂದು ಕಾಂಗ್ರೆಸ್ ಸದಸ್ಯ ಗಣಪತಿ ಮಂಡಗಳಲೆ ಹೇಳಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸವಿತಾ ವಾಸು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.