
ಶಿವಮೊಗ್ಗ: ‘ದೇಶದಲ್ಲಿ ಹೂಡಿಕೆ ಸಾಮರ್ಥ್ಯ ಇರುವ 90 ಕೋಟಿ ಜನರ ಪೈಕಿ 6 ಕೋಟಿ ಮಂದಿ ಮಾತ್ರ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಆ ಪ್ರಮಾಣ ಶೇ 10ರಷ್ಟೂ ಮುಟ್ಟಿಲ್ಲ. ತಪ್ಪು ಕಲ್ಪನೆಗಳು ಹಾಗೂ ಮಾಹಿತಿ ಕೊರತೆಯೇ ಇದಕ್ಕೆ ಕಾರಣ’ ಎಂದು ಕೆನರಾ ರೊಬೆಕೊ–ಮ್ಯೂಚುವಲ್ ಫಂಡ್ಸ್ ಸಂಸ್ಥೆಯ ಮಂಗಳೂರು ವಲಯದ ಉಪಾಧ್ಯಕ್ಷ ಮುರಳೀಧರ ಶೆಣೈ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ‘ಪ್ರಜಾವಾಣಿ’ ಸಹಯೋಗದಲ್ಲಿ ಕೆನರಾ ರೊಬೆಕೊ–ಮ್ಯೂಚುವಲ್ ಫಂಡ್ಸ್ ಸಂಸ್ಥೆ ಶನಿವಾರ ಆಯೋಜಿಸಿದ್ದ ‘#ಸ್ಮಾರ್ಟ್ ಟುಮಾರೊ–ಹೂಡಿಕೆದಾರರ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಹೂಡಿಕೆಯ ಬಗ್ಗೆ ಮಾತನಾಡಿದರು.
‘ಷೇರು ಮಾರುಕಟ್ಟೆಯ ಬಗ್ಗೆ ಗೊತ್ತಿಲ್ಲದವರು ಪತ್ರಿಕೆ, ಟಿವಿ ನೋಡಿಕೊಂಡು ಹೂಡಿಕೆ ಮಾಡಿ ಲಾಭ ಗಳಿಸಿದವರು, ನಷ್ಟ ಮಾಡಿಕೊಂಡವರು ಇದ್ದಾರೆ. ಆದರೆ ಮ್ಯೂಚುವಲ್ ಫಂಡ್ ಅತ್ಯಂತ ಸುರಕ್ಷಿತ ಉಳಿತಾಯ ಕ್ರಮ. 20 ನೇ ವರ್ಷದ ನಂತರದ ವ್ಯವಸ್ಥಿತ ಹೂಡಿಕೆ 50ನೇ ವರ್ಷದ ಸುಭದ್ರ ಹಾಗೂ ಸುರಕ್ಷಿತ ಬದುಕಿಗೆ ನೆರವಾಗಲಿದೆ’ ಎಂದರು.
‘ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಹೆಚ್ಚು ಜನರು ಈ ಕುರಿತ ಮಾಹಿತಿ ಹೊಂದಿದ್ದಾರೆ. ಅದೇ ರೀತಿ ಜನಸಾಮಾನ್ಯರು ಮಾಹಿತಿ ಪಡೆದರೆ ವೃತ್ತಿಪರರ ರೀತಿ ಬದಲಾಗಬಹುದು. 2047ರ ವೇಳೆಗೆ ಭಾರತದ ಆರ್ಥಿಕತೆ 30 ಟ್ರಿಲಿಯನ್ ಡಾಲರ್ ಆಗಲಿದೆ. ದೇಶದ ಈ ಬೆಳವಣಿಗೆಯಲ್ಲಿ ಸಾರ್ವಜನಿಕರು ಸಹ ಭಾಗಿಯಾಗಲು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆ’ ಎಂದು ಹೇಳಿದರು.
‘ದೇಶದ ಪ್ರಸ್ತುತ ಆರ್ಥಿಕತೆ 4.2 ಟ್ರಿಲಿಯನ್ ಡಾಲರ್ ಆಗಿದ್ದು, ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಜಿಡಿಪಿ ಶೇ 7.5ರಷ್ಟಿದೆ. ಜನರ ತಲಾ ಆದಾಯ ಸದ್ಯ ₹2 ಲಕ್ಷ ಇದ್ದು, 2047ರ ವೇಳೆಗೆ ₹16 ಲಕ್ಷಕ್ಕೂ ಅಧಿಕ ಆಗಲಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಜನರಲ್ಲಿ ಹಣ ಉಳಿತಾಯವಾಗುತ್ತಿದೆ. ಹೂಡಿಕೆ ಮಾಡಲು ಇದು ಸದಾವಕಾಶ’ ಎಂದು ಅಭಿಪ್ರಾಯಪಟ್ಟರು.
‘ಜನರ ವೇತನ ಪ್ರಮಾಣ ಏರಿಕೆಯಾಗುತ್ತಿದ್ದು, ಇದರಲ್ಲಿ ಸಾಧ್ಯವಾದಷ್ಟು ಉಳಿಸಬೇಕು. ಉಳಿಕೆ ಹಣದಿಂದ ಉತ್ತಮ ಲಾಭ ಪಡೆಯಲು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು. ಆದಾಯದ ಶೇ 10ರಿಂದ 15 ರಷ್ಟನ್ನು ಹೂಡಿಕೆ ಮಾಡಿ ಅದನ್ನು ಕನಿಷ್ಠ 5ರಿಂದ 10 ವರ್ಷ ಮುಟ್ಟಬಾರದು. ಆಗ ಮಾತ್ರ ಹೂಡಿಕೆಯ ಉದ್ದೇಶ ಈಡೇರುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನ ಜನರು 2 ವರ್ಷಕ್ಕೆ ಅದನ್ನು ವಾಪಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಾರೆ. ಅದು ಸರಿಯಲ್ಲ. ಅದೇ ರೀತಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕಾದರೆ ಆರ್ಥಿಕ ಶಿಸ್ತು ಪಾಲಿಸಬೇಕು. ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ಪರಿಣತರ ನೆರವು ಪಡೆಯಬೇಕು’ ಎಂದು ಸಲಹೆ ನೀಡಿದರು.
‘ಬ್ಯಾಂಕ್‌ನಲ್ಲಿ ಹಣವಿಟ್ಟರೆ ಸಿಗುವ ಬಡ್ಡಿ ದರ ಕಡಿಮೆ. ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಲಾಭ ಸಿಗಲು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಎಲ್ಲ ರೀತಿಯಿಂದಲೂ ಉತ್ತಮವಾಗಿರುವ ಮ್ಯೂಚುವಲ್ ಫಂಡ್‌ನತ್ತ ಅನೇಕ ಜನರು ಒಲವು ತೋರುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಮಕ್ಕಳ ಶಿಕ್ಷಣ, ಮದುವೆಯಂತಹ ವಿಚಾರಗಳಿಗೆ ಎಸ್‌ಐಪಿ (ಸಿಸ್ಟಮೆಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್) ಸೂಕ್ತ. ಅದನ್ನು ಕೂಡ 25ನೇ ವಯಸ್ಸಿನಲ್ಲಿ ಆರಂಭಿಸುವುದು ಅಗತ್ಯ’ ಎಂದು ತಿಳಿಸಿದರು.
‘ಮ್ಯೂಚುವಲ್ ಫಂಡ್ ವಲಯ ಪ್ರವೇಶಿಸುವಾಗ ಬ್ಯಾಂಕ್, ಹೂಡಿಕೆ ಪ್ರತಿನಿಧಿಗಳ ನೆರವು ಪಡೆಯಬಹುದು. ಕೇವಲ 5ರಿಂದ 7 ವರ್ಷಗಳಲ್ಲೇ ಹೂಡಿಕೆಗಿಂತ ದುಪ್ಪಟ್ಟು ಹಣ ಪಡೆಯಬಹುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ಭದ್ರಾವತಿಯ ಎಂಪಿಎಂ ಕಾರ್ಖಾನೆಯ ನಿವೃತ್ತ ಮುಖ್ಯ ಎಂಜಿನಿಯರ್ ಟಿ.ದೇವೇಂದ್ರ, ಮೆಗ್ಗಾನ್ ಆಸ್ಪತ್ರೆಯ ಸರ್ಜನ್ ಡಾ.ಜಿ.ಯು.ರಕ್ಷಿತ್, ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಬ್ರ್ಯಾಂಡ್ ವಿಭಾಗದ ಪ್ರಮೋದ್, ಪ್ರಸರಣ ವಿಭಾಗದ ದಾವಣಗೆರೆ ಬ್ಯೂರೊ ವ್ಯವಸ್ಥಾಪಕ ನಂದಗೋಪಾಲ್ ಪಾಲ್ಗೊಂಡಿದ್ದರು.
ಸರಳ ಭಾಷೆಯಲ್ಲಿ ಅರ್ಥವಾಗುವಂತೆ ಹೇಳಿಕೊಟ್ಟರು.. ಮುರಳೀಧರ ಶೆಣೈ ತಮ್ಮ ಉಪನ್ಯಾಸದಲ್ಲಿ ಎಸ್‌ಐಪಿ (ಸಿಸ್ಟಮೆಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್) ಎಸ್‌ಟಿಪಿ (ಸಿಸ್ಟಮೆಟಿಕ್ ಟ್ರಾನ್ಸ್‌ಫರ್ ಪ್ಲಾನ್) ಹಾಗೂ ಎಸ್‌ಡಬ್ಲ್ಯುಪಿ (ಸಿಸ್ಟಮೆಟಿಕ್ ವಿತ್‌ಡ್ರಾವಲ್ ಪ್ಲಾನ್) ಓವರ್ ನೈಟ್ ಇನ್‌ವೆಸ್ಟ್‌ಮೆಂಟ್ ಫಂಡ್ ಐಒಸಿ ಓಎನ್‌ಜಿಸಿ ಇನ್ಫೋಸಿಸ್ ರಿಲಯನ್ಸ್ ಹೀಗೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕಾರ್ಪೊರೇಟ್ ಬಾಂಡ್ ಈಕ್ವಿಟಿ ಸ್ಟಾಕ್ ಹೀಗೆ ಮ್ಯೂಚುವಲ್ ಫಂಡ್‌ನ ಬೇರೆ ಬೇರೆ ಉಳಿತಾಯ ಕ್ರಮಗಳ ಬಗ್ಗೆ ಸರಳವಾಗಿ ಹೇಳಿಕೊಟ್ಟರು. ನೆರೆದವರ ಪ್ರಶ್ನೆಗಳಿಗೆ ಅವರಿಗೆ ಅರ್ಥವಾಗುವಂತೆ ಸರಳವಾಗಿ ಪರಿಹಾರ ತಿಳಿಸಿಕೊಟ್ಟರು.
- ಶಿಕ್ಷಕರು ಕೃಷಿಕರಿಂದ ಹೆಚ್ಚಿನ ಸ್ಪಂದನೆ.. ಕಾರ್ಯಕ್ರಮಕ್ಕೆ ಶಿಕ್ಷಕರು ಕೃಷಿಕರು ನಿವೃತ್ತ ಉದ್ಯೋಗಿಗಳು ಖಾಸಗಿ ಕಂಪನಿಯ ಉದ್ಯೋಗಿಗಳು ವೈದ್ಯರು ಹಾಗೂ ವ್ಯಾಪಾರ ಉದ್ಯಮದಲ್ಲಿ ತೊಡಗಿದವರಿಂದ ಉತ್ತಮ ಸ್ಪಂದನೆ ದೊರೆಯಿತು. ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಲಾಭದಾಯಕ ಹಾಗೂ ಸುರಕ್ಷಿತ ಉಳಿತಾಯ ಕ್ರಮಗಳ ಬೇರೆ ಬೇರೆ ಮಗ್ಗುಲುಗಳ ಬಗ್ಗೆ ಪ್ರಶ್ನೆಗಳ ಬಾಣ ಎಸೆದು ಉತ್ತರ ಪಡೆದರು.
ನಾನೂ ಹೂಡಿಕೆ ಮಾಡಿದ್ದೇನೆ. ಆದರೆ ಈ ಕಾರ್ಯಕ್ರಮಕ್ಕೆ ಬಂದ ಮೇಲೆ ಹೂಡಿಕೆ ವಿಚಾರದಲ್ಲಿ ಇದ್ದ ಕೆಲವು ಗೊಂದಲಗಳು ಪರಿಹಾರವಾದವು. ಕನಿಷ್ಠ 5 ವರ್ಷವಾದರೂ ಹೂಡಿಕೆ ಮಾಡಬೇಕು. ಇಲ್ಲವಾದರೆ ಅದರಿಂದ ಉಪಯೋಗವಿಲ್ಲ ಎಂಬ ಮಾಹಿತಿ ದೊರೆಯಿತು. ಅನುಪಮಾ ಶಿಕ್ಷಕಿ ಗೆಜ್ಜೇನಹಳ್ಳಿ ಶಾಲೆ ಬೇಸಿಕ್ ಈಕ್ವಿಟ್ ಫಂಡ್ ಬಗ್ಗೆ ಗೊತ್ತಿರಲಿಲ್ಲ. ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭದಾಯಕ ಎಂಬುದರ ಬಗ್ಗೆ ಕಾರ್ಯಕ್ರಮದಲ್ಲಿ ಹೇಳಿಕೊಟ್ಟದ್ದು ಉಪಯೋಗವಾಯಿತು.
-ನೇತ್ರಾವತಿ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯನೂರು
ಬಡ್ಡಿಗೆ ಸಾಲ ಕೊಟ್ಟು ಅದು ವಾಪಸ್ ಬಾರದೇ ನಷ್ಟ ಅನುಭವಿಸುವುದು ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟು ಕಡಿಮೆ ಬಡ್ಡಿ ಪಡೆಯುವುದಕ್ಕಿಂತ ಮ್ಯೂಚುವಲ್ ಫಂಡ್ ಸುರಕ್ಷಿತ ಹಾಗೂ ಲಾಭದಾಯಕ ಹೂಡಿಕೆ ಎಂಬುದು ಇಲ್ಲಿ ಗೊತ್ತಾಯಿತು. ರುದ್ರೇಶ್ ಶಿಕ್ಷಕ ಬಸವಾಪುರ ಹಣದ ಸುರಕ್ಷಿತ ಹೂಡಿಕೆಯ ಮಾರ್ಗಗಳ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟರು. ಯಾರಿಗೋ ಕೊಟ್ಟು ಕಳೆದುಕೊಳ್ಳುವುದಕ್ಕಿಂತ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಅನಿಸಿತು.
- ಎಸ್.ಜಿ.ಶೋಭಾ ಶಿಕ್ಷಕಿ ಹುಣಸೋಡು
ಹೂಡಿಕೆಯಿಂದ ಏನೂ ಆಗೊಲ್ಲ. ಮ್ಯುಚುವಲ್ ಫಂಡ್‌ನಲ್ಲಿ ಹೂಡಿಕೆ ನಷ್ಟಕ್ಕೆ ಹಾದಿ ಎಂಬ ಗೊಂದಲಗಳಿಗೆ ಇಲ್ಲಿ ಉತ್ತರ ದೊರೆಯಿತು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಹೆಚ್ಚು ಅನುಕೂಲ.
-ಸಾದಿಕಾ ಬಾನು ಕುವೆಂಪು ಶತಮಾನೋತ್ಸವ ಬಿ.ಇಡಿ ಕಾಲೇಜಿನ ಉಪನ್ಯಾಸಕಿ ಶಿವಮೊಗ್ಗ
ಹೂಡಿಕೆಯ ಬಗ್ಗೆ ಆಸಕ್ತಿ ಇತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದರಿಂದ ಏನು ಹೇಗೆ ಹೂಡಿಕೆ ಮಾಡಬೇಕು. ಯಾವುದು ಸುರಕ್ಷಿತ ಎಂಬುದರ ರೂಪುರೇಷೆ ದೊರೆಯಿತು. ಹೂಡಿಕೆಯ ಬಗ್ಗೆ ತಿಳಿದುಕೊಳ್ಳುವುದು ಬೇಕಾದಷ್ಟು ಇದೆ ಎಂಬುದು ಇಲ್ಲಿ ಗೊತ್ತಾಯಿತು.
-ವಾಣಿ ಶಶಿಧರ್ ಶಿಕ್ಷಕಿ ಬೇಡರಹೊಸಳ್ಳಿ
ಮ್ಯೂಚುವಲ್ ಫಂಡ್ ಅಂದರೆ ಏನು ಎಂಬುದು ತಿಳಿಯಿತು. ಕಾರ್ಯಕ್ರಮದಲ್ಲಿ ಆ ಬಗ್ಗೆ ಚೆನ್ನಾಗಿ ಮಾಹಿತಿ ಕೊಟ್ಟರು. ಪ್ರಜಾವಾಣಿಯಲ್ಲಿ ಬಂದ ಪ್ರಕಟಣೆ ನೋಡಿ ಇಲ್ಲಿಗೆ ಬಂದದ್ದು ಸಾರ್ಥಕವಾಯಿತು.
-ಎಚ್.ವಿ.ಪ್ರಕಾಶ್ ಕೃಷಿಕ ಚೀಲೂರು
ಇಂತಹ ಕಾರ್ಯಕ್ರಮ ಪತ್ರಿಕೆ ಟಿವಿ ಸಾಮಾಜಿಕ ಜಾಲತಾಣದ ಮೂಲಕ ನಿರಂತರವಾಗಿ ಮೂಡಿ ಬಂದರೆ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಹಾಗೂ ಹೂಡಿಕೆಯ ಮಹತ್ವ ತಿಳಿಸಿಕೊಡಲು ನೆರವಾಗುತ್ತದೆ. ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌ನ ಈ ಕಾರ್ಯ ಶ್ಲಾಘನೀಯ
-ಡಾ.ಜಿ.ಯು.ರಕ್ಷಿತ್ ಸರ್ಜನ್ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ
ಹೂಡಿಕೆಯ ಬಗ್ಗೆ ಇದ್ದ ಕೆಲವು ಗೊಂದಲಗಳು ನಿವಾರಣೆ ಆದವು. ಜಿಡಿಪಿಯ ಬಗ್ಗೆ ಆಳವಾದ ತಿಳಿವಳಿಕೆ ಇಲ್ಲಿ ದೊರೆಯಿತು. ಕಾರ್ಯಕ್ರಮಕ್ಕೆ ಬಂದದ್ದು ಉಪಯುಕ್ತವಾಯಿತು. ಮಕ್ಕಳಿಗೂ ಉಳಿತಾಯ ಹೂಡಿಕೆಯ ಮಹತ್ವ ತಿಳಿಸಲು ನೆರವಾಯಿತು.
-ಎಂ.ಬಿ.ಧನರಾಜ್ ಶಿಕ್ಷಕ ಭದ್ರಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.