ADVERTISEMENT

ಶಿವಮೊಗ್ಗ: ಮೆಕ್ಕೆಜೋಳ ಒಣಗಿಸಲು ವರುಣನ ಅಡ್ಡಿ

ನಾಗರಾಜ ಹುಲಿಮನೆ
Published 9 ಜೂನ್ 2025, 8:06 IST
Last Updated 9 ಜೂನ್ 2025, 8:06 IST
<div class="paragraphs"><p>ಶಿವಮೊಗ್ಗ ತಾಲ್ಲೂಕು ಚೋರಡಿ ಸಮೀಪ ಕುಮದ್ವತಿ ನದಿಯ ಹಳೆಯ ಸೇತುವೆ ಮೇಲೆ ರೈತರು ಬಿಸಿಲಿಗೆ ಮೆಕ್ಕೆಜೋಳ ಒಣಗಿಸುತ್ತಿರುವುದು </p></div>

ಶಿವಮೊಗ್ಗ ತಾಲ್ಲೂಕು ಚೋರಡಿ ಸಮೀಪ ಕುಮದ್ವತಿ ನದಿಯ ಹಳೆಯ ಸೇತುವೆ ಮೇಲೆ ರೈತರು ಬಿಸಿಲಿಗೆ ಮೆಕ್ಕೆಜೋಳ ಒಣಗಿಸುತ್ತಿರುವುದು

   

ಪ್ರಜಾವಾಣಿ ಚಿತ್ರ

ಶಿವಮೊಗ್ಗ: ಮುಂಗಾರು ಮಳೆಯಿಂದ ಸಂತೃಪ್ತಗೊಂಡ ಬಹುತೇಕ ರೈತರು ಬೀಜ ಬಿತ್ತನೆಗೆ ಅಣಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಬೇಸಿಗೆಯಲ್ಲಿ ಬಿತ್ತಿ ಬೆಳೆದ ಮೆಕ್ಕೆಜೋಳ, ಭತ್ತದ ಪೈರು ಕೈ ಸೇರುತ್ತಿಲ್ಲ ಎನ್ನುವ ಆತಂಕವೂ ಅನ್ನದಾತರಲ್ಲಿ ಮನೆ ಮಾಡಿದೆ.

ADVERTISEMENT

ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೇಸಿಗೆ ಬೆಳೆಯಾಗಿ ಭತ್ತ ಹಾಗೂ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಶಿವಮೊಗ್ಗ, ಸಾಗರ, ಹೊಸನಗರ, ಶಿಕಾರಿಪುರ ಭಾಗದಲ್ಲಿ ಬೆಳೆ ಕಟಾವು ಕೂಡ ಆಗಿದೆ. ಆದರೆ, ಮಳೆಯಿಂದಾಗಿ ಕಟಾವುಗೊಳಿಸಿದ ಮೆಕ್ಕೆಜೋಳವನ್ನು ಒಣಗಿಸಲು ಸರಿಯಾದ ಬಿಸಿಲು ವಾತಾವರಣ ಇಲ್ಲ. ಇದರಿಂದ ಹಸಿ ಮೆಕ್ಕೆಜೋಳವನ್ನು ಮಾರುಕಟ್ಟೆ ಬೆಲೆಗೆ ಖರೀದಿಸಲು ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ.

ವಾರದಿಂದ ಮಳೆ ಬಿಡುವುಕೊಟ್ಟಿದೆ. ಇದರ ಮಧ್ಯೆ ಬಹುತೇಕ ರೈತರು ಮೆಕ್ಕೆಜೋಳ ಕಟಾವುಗೊಳಿಸಿ ಹೆದ್ದಾರಿ ಇಕ್ಕೆಲ, ಗೋದಾಮು, ಮನೆಯ ಚಾವಡಿ ಹಾಗೂ ಮೇಲ್ಮಹಡಿಯಲ್ಲಿ ಒಣಗಿಸಲು ಹರಸಾಹಸ ಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಒಣಗಿದ ಸ್ಥಳೀಯ ಮೆಕ್ಕೆಜೋಳಕ್ಕೆ ₹2,400 ರಿಂದ ₹2,500ರ ವರೆಗೂ ದರ ಇದೆ. ಆದರೆ, ಈ ದರ ರೈತರಿಗೆ ಸಿಗುತ್ತಿಲ್ಲ. 1 ರಿಂದ 2 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ₹30,000 ದಿಂದ ₹40,000 ಖರ್ಚಾಗುತ್ತದೆ. ಮಾಡಿದ ಖರ್ಚಾದರೂ ಕೈ ಸೇರಲಿ ಎನ್ನುವ ಮನೋಭಾವದಲ್ಲಿ ರೈತರಿದ್ದಾರೆ.

ಬೇಸಿಗೆ ಹಂಗಾಮಿನಲ್ಲಿ 1.5 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಬೆಳೆಯು ಸಂಪೂರ್ಣ ನೆಲ ಕಚ್ಚಿತ್ತು. ಮೆಕ್ಕೆಜೋಳವನ್ನು ಕಟಾವುಗೊಳಿಸಿ ಒಕ್ಕಲು ಮಾಡಲು ಬಿಸಿಲು ಇಲ್ಲದೇ ಹೋಯಿತು. ಇದರಿಂದ, ಮೆಕ್ಕೆಜೋಳ ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಬಳಿಕ ಜಾನುವಾರುಗಳ ಮೇವಿಗಾಗಿ ಕಂಪನಿಯೊಂದಕ್ಕೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಯಿತು. 70 ಕ್ವಿಂಟಲ್ ಮೆಕ್ಕೆಜೋಳಕ್ಕೆ ಸರಿಯಾಗಿ ಒಣಗಿಲ್ಲ ಎನ್ನುವ ಕಾರಣವೊಡ್ಡಿ 10 ಕ್ವಿಂಟಲ್ ಜೋಳವನ್ನು ಭೂಸು (ಫಂಗಸ್‌) ಹಿಡಿದಿದೆ ಎಂದು ಖರೀದಿಸಿದರು. ಹೀಗಾಗಿ 60 ಕ್ವಿಂಟಲ್‌ಗೆ ಮಾತ್ರವೇ ಹಣ ದೊರೆಯಿತು ಎಂದು ಸನ್ನಿವಾಸ ಗ್ರಾಮದ ರೈತ ಎಂ.ಯೋಗೀಶ್ ಅವರು ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ ಸಂಪೂರ್ಣ ಎಲ್ಲ ಬೆಳೆಯನ್ನು ಕಟಾವುಗೊಳಿಸಲಾಗಿದೆ. ಆದರೆ, ತಡವಾಗಿ ಬಿತ್ತನೆ ಮಾಡಿದ ರೈತರು ಮಳೆಗೆ ಸಿಲುಕಿದ್ದಾರೆ. ಮುಂಗಾರು ಆರಂಭಗೊಂಡಿದ್ದು, ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಇಲಾಖೆಯಿಂದ ಬಿತ್ತನೆ ಬೀಜ, ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸಲು ಕೃಷಿ ಇಲಾಖೆ ಕೇಂದ್ರಗಳಲ್ಲಿ ಶೇಖರಿಸಿಡಲಾಗಿದ್ದು, ರೈತರಿಗೆ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮಳೆಯ ಬಿಡುವಿನ ಮಧ್ಯೆ ಜೋಳದ ಒಕ್ಕಲು ಮಾಡಲಾಗಿದೆ. ಆದರೆ, ಒಣಗಿಸಲು ಬಿಸಿಲು ಕಣ್ಣಾಮುಚ್ಚಾಲೆ ಆಡುತ್ತಿದೆ. ಒಂದೇ ಬಾರಿಗೆ ಮೋಡ ಕವಿದುಕೊಳ್ಳುತ್ತದೆ. ಮಳೆಯ ಭಯದಿಂದ ನೆಲಕ್ಕೆ ಹರಡಿದ ಜೋಳವನ್ನು ದುಂಡು ಮಾಡಿ ಟಾರ್ಪಲ್ ಹೊದಿಸಬೇಕು. ಪುನಃ ಸ್ವಲ್ಪ ಹೊತ್ತಿಗೆ ಮೋಡ ತಿಳಿಯಾಗಿ ಬಿಸಿಲು ಬಿಡುತ್ತದೆ. ಹೀಗೆ ದಿನವೆಲ್ಲ ಜೋಳವನ್ನು ಮುಚ್ಚುವುದು, ಹರಡುವುದರಲ್ಲಿಯೇ ಕಳೆಯುತ್ತಿದೆ ಎಂದು ಚೋರಡಿ ಸಮೀಪದ ರೈತ ಮಹಿಳೆ ಕುಸುಮಾ ತಿಳಿಸಿದರು.

ರೈತರಿಗೆ ಮಾರುಕಟ್ಟೆ ಬೆಲೆ ಸಮರ್ಪಕವಾಗಿ ಸಿಗುತ್ತಿಲ್ಲ. ಜೋಳ ಒಣಗಿಲ್ಲ ಎನ್ನುವ ಕಾರಣವೊಡ್ಡಿ ಬೇಕಾ ಬಿಟ್ಟಿಯಾಗಿ ಖರೀದಿಗೆ ಕೇಳುತ್ತಿದ್ದಾರೆ. ಮಾರುಕಟ್ಟೆ ಬೆಲೆಗಿಂತ ತುಂಬಾ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿರ್ವಾಯತೆ ರೈತರಿಗೆ ಉಂಟಾಗಿದೆ ಎಂದರು.

ಶಿವಮೊಗ್ಗ ಆಯನೂರು ಸಮೀಪದ ಚಿಕ್ಕದಾನವಂದಿ ಗ್ರಾಮದ ಜಮೀನೊಂದರಲ್ಲಿ ಮೆಕ್ಕೆಜೋಳ ಬಿತ್ತನೆಗೆ ರೈತರು ಸಿದ್ಧತೆ ನಡೆಸಿರುವುದು
ಡಿಎಪಿ ಗೊಬ್ಬರ 50 ಕೆ.ಜಿ.ಗೆ ₹1350 ದರ ಇದೆ.  ಬೀಜ ಬಿತ್ತನೆ ಪೂರ್ವದಲ್ಲಿ ರೈತರು ಡಿಎಪಿ ಬದಲಿಗೆ ಸಾರಜನಕ ರಂಜಕ ಮತ್ತು ಪೊಟ್ಯಾಶಿಯಂ ಯುಕ್ತ ಕಾಂಪ್ಲೆಕ್ಸ್ ಎನ್‌ಪಿಕೆ ಗೊಬ್ಬರ ಬಳಸಬೇಕು
ಕಿರಣ್ ಕುಮಾರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ
‘ಖಾಸಗಿಯಲ್ಲಿ ರಸಗೊಬ್ಬರ ದುಬಾರಿ’
ಮುಂಗಾರು ಆರಂಭದಿಂದ ಬಿತ್ತನಗೆ ಸಿದ್ಧತೆ ನಡೆದಿದೆ. ಆದರೆ ಸಮರ್ಪಕವಾದ ಬಿತ್ತನೆ ಬೀಜ ರಸಗೊಬ್ಬರ ಲಭ್ಯವಾಗುತ್ತಿಲ್ಲ. ಕೃಷಿ ಇಲಾಖೆ ಕೇಂದ್ರಗಳಲ್ಲಿ ಪಹಣಿಗೆ ಇಂತಿಷ್ಟು ಪೂರೈಕೆ ಮಾಡಬೇಕು ಎಂದು ಸೀಮಿತಗೊಳಿಸಿದ್ದಾರೆ. ಖಾಸಗಿ ಅಂಗಡಿಗಳಲ್ಲಿ ಬೇಕಾ ಬಿಟ್ಟಿಯಾಗಿ ಬೆಲೆ ನಿಗದಿ ಪಡಿಸಿದ್ದಾರೆ. ಇದರಿಂದ ದುಪ್ಪಟ್ಟು ಹಣ ನೀಡಿ ಬಿತ್ತನೆ ಬೀಜ ರಸ ಗೊಬ್ಬರ ಖರೀದಿಸಬೇಕಿದೆ. ಖಾಸಗಿಯಲ್ಲಿ ಡಿಎಪಿ ರಸಗೊಬ್ಬರ 50 ಕೆ.ಜಿ.ಗೆ ₹1600ರ ವರೆಗೆ ದರ ನಿಗದಿ ಪಡಿಸಿದ್ದು ಇದು ಹೊರೆಯಾಗಿದೆ ಎಂದು ಚಿಕ್ಕದಾನವಂದಿ ಗ್ರಾಮದ ರೈತ ಸಿದ್ದಪ್ಪ ದೂರಿದರು.
ಸಿಗದ ರಸ ಗೊಬ್ಬರ; ಕೃಷಿಗೆ ಹಿನ್ನಡೆ
ಸಾಗರ ತಾಲ್ಲೂಕಿನ ಕರೂರು ಹೋಬಳಿ ವ್ಯಾಪ್ತಿಯಲ್ಲಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕೆಲವು ಗೊಬ್ಬರಗಳು ದೊರೆಯುತ್ತಿಲ್ಲ. ರೈತರು ಕೃಷಿ ಇಲಾಖೆ ಕೇಂದ್ರಗಳಿಗೆ ಅಲೆದು ಸುಸ್ತಾಗಿದ್ದಾರೆ. ಇಲ್ಲಿ ಪೊಟ್ಯಾಷ್‌ ಯೂರಿಯಾ ಡಿಎಪಿ ಗೊಬ್ಬರದ ಕೊರತೆ ಹೆಚ್ಚಿದೆ. ಸಣ್ಣ ಹಿಡುವಳಿ ರೈತರಿಗೂ 3ರಿಂದ 5 ಚೀಲ ಗೊಬ್ಬರದ ಅವಶ್ಯಕತೆ ಇದೆ. ಆದರೆ ಗೊಬ್ಬರ ಮಾತ್ರ ಸಿಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಲಿದೆ ಎನ್ನುವುದು ರೈತರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.