ADVERTISEMENT

ಹಿಂದುತ್ವದ ತಳಹದಿಯ ಮೇಲೆ ದೇಶ ಅಭಿವೃದ್ಧಿ: ಸು.ರಾಮಣ್ಣ

ಶ್ರೀಗಂಧ ಸಂಸ್ಥೆ: ಕೆ.ಎಸ್. ಈಶ್ವರಪ್ಪ ಹುಟ್ಟುಹಬ್ಬ ಸಂಬಂಧ ಧರ್ಮ ಸಭೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:09 IST
Last Updated 10 ಜೂನ್ 2025, 14:09 IST
ಶಿವಮೊಗ್ಗದಲ್ಲಿ ಮಂಗಳವಾರ ಶ್ರೀಗಂಧ ಸಂಸ್ಥೆಯಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಭೆಯನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಮಂಗಳವಾರ ಶ್ರೀಗಂಧ ಸಂಸ್ಥೆಯಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಭೆಯನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿದರು   

ಪ್ರಜಾವಾಣಿ ವಾರ್ತೆ

ಶಿವಮೊಗ್ಗ: ಹಿಂದುತ್ವ ಉಳಿದರೆ ಕುರುಬ, ದಲಿತ, ಬ್ರಾಹ್ಮಣ ಸಮುದಾಯಗಳು, ಮಠ-ಮಂದಿರಗಳು ಉಳಿಯುತ್ತವೆ. ದೇಶ ಹಿಂದುತ್ವದ ತಳಹದಿಯ ಮೇಲೆ ಅಭಿವೃದ್ಧಿ ಸಾಧಿಸುತ್ತಿದೆ. ಜಗತ್ತಿನ ಇತರೆ ರಾಷ್ಟ್ರಗಳನ್ನು ತನ್ನತ್ತ ಸೆಳೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು. 

ಇಲ್ಲಿನ ಶ್ರೀಗಂಧ ಸಂಸ್ಥೆಯಿಂದ ಶುಭಮಂಗಳ ಸಮುದಾಯ ಭವನದಲ್ಲಿ ಮಂಗಳವಾರ ಕೆ.ಎಸ್. ಈಶ್ವರಪ್ಪ ಅವರ 77ನೇ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.

ADVERTISEMENT

ಕಳೆದ 10 ವರ್ಷಗಳಲ್ಲಿ ದೇಶದ ಚಿತ್ರಣ ಸಂಪೂರ್ಣ ಬದಲಾಗಿದೆ. ಪ್ರತಿ ಮನೆಯೂ ಭಕ್ತಿಯ ದೇವಾಲಯವಾಗಬೇಕು. ಬದಲಾಗುತ್ತಿರುವ ಭಾರತದ ಸಾಕ್ಷಿಯಾಗುವ ಅವಕಾಶ ನಮಗೆ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. 

ಈಶ್ವರಪ್ಪನವರು ಎಂದಿಗೂ ಜಾತಿಯನ್ನು ಏಣಿಯಾಗಿ ಬಳಸಲಿಲ್ಲ. ಬದಲಾಗಿ ಹಿಂದುತ್ವ, ರಾಷ್ಟ್ರ ಹಾಗೂ ಸಮಾಜ ಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ ಎಂದು ಶ್ಲಾಘಿಸಿದರು. 

ಸಾನ್ನಿಧ್ಯ ವಹಿಸಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀರಾಮ ತೋರಿದ ಆದರ್ಶಗಳನ್ನು ಕೆ.ಎಸ್. ಈಶ್ವರಪ್ಪ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬರುತ್ತಿದ್ದಾರೆ. ಅದು ಇಡೀ ಸಮಾಜಕ್ಕೆ ಮಾದರಿ ಎಂದರು. 

ಚಿತ್ರದುರ್ಗದ ಮಾದಾರ ಗುರುಪೀಠದ ಮಾದಾರಚನ್ನಯ್ಯ ಸ್ವಾಮೀಜಿ, ಈಶ್ವರಪ್ಪನವರು ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರಭಕ್ತಿ ಮೈಗೂಡಿಸಿಕೊಂಡವರು. ಎಷ್ಟೇ ರಾಜಕೀಯ ವಿಪ್ಲವವಾದರೂ ರಾಷ್ಟ್ರೀಯತೆಯಿಂದ ವಿಮುಖರಾಗಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಹೊಸದುರ್ಗ ಕಾಗಿನೆಲೆ ಶಾಖಾಮಠದ ಈಶ್ವರಾನಂದಪುರಿ ಶ್ರೀ, ಭಾರತ ಮಾತೆಯೇ ನನ್ನ ತಾಯಿ ಎಂದು ಭಾವಿಸಿಕೊಂಡವರು ಈಶ್ವರಪ್ಪ. ಅವರಿಗೆ ಪಕ್ಷಬಲ ಇರಲಿಲ್ಲ. ಆದರೆ ಗುರುಬಲ, ದೈವಬಲ ಇದೆ ಎಂದರು. 

ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮನುಷ್ಯನಿಗೆ ದೇವರು ವಿವೇಕ ಕೊಟ್ಟಿದ್ದಾನೆ. ಅದನ್ನು ಬಳಕೆಮಾಡಿ, ಜೀವನದಲ್ಲಿ ಆದರ್ಶ ಗುರಿಯನ್ನು ಇಟ್ಟುಕೊಂಡು ಜೀವನ ಸಾರ್ಥಕತೆ ಸಾಧಿಸಬೇಕು ಎಂದರು. 

ಧರ್ಮಸಭೆಗೂ ಮೊದಲು ಮಹಾವೀರ ಗೋಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು. ಲಲಿತ ಸಹಸ್ರನಾಮ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ರುದ್ರಹೋಮ, ಶತ ಚಂಡಿಹವನ, 1008 ಮಹಿಳೆಯರಿಗೆ ಬಾಗಿನ ಸಮರ್ಪಣೆ ನಡೆಯಿತು. 

ಕೆ.ಎಸ್.ಈಶ್ವರಪ್ಪ, ಪತ್ನಿ ಜಯಲಕ್ಷ್ಮೀ, ಪುತ್ರ ಕೆ.ಈ. ಕಾಂತೇಶ್, ನಟರಾಜ ಭಾಗವತ್, ಪದ್ಮನಾಭ ಭಟ್, ಮಹಾಲಿಂಗ ಶಾಸ್ತ್ರಿ, ಕೆ.ಜಿ. ಕೃಷ್ಣಾನಂದ, ಈ. ವಿಶ್ವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.