ADVERTISEMENT

ಶಿವಮೊಗ್ಗ: ಯುವಜನರ ಅಭ್ಯುದಯಕ್ಕೆ ವಿವಿ ನೆರವು

ರಾಗಿಗುಡ್ಡ: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಉದ್ಘಾಟಿಸಿದ ಶಾಸಕ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 6:02 IST
Last Updated 25 ಮಾರ್ಚ್ 2023, 6:02 IST
ಶಿವಮೊಗ್ಗದ ರಾಗಿಗುಡ್ಡದ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ಆರಂಭಿಸಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ಗಣ್ಯರು.
ಶಿವಮೊಗ್ಗದ ರಾಗಿಗುಡ್ಡದ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ಆರಂಭಿಸಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ಗಣ್ಯರು.   

ಶಿವಮೊಗ್ಗ: ಯುವ ಜನರಲ್ಲಿ ದೇಶಾಭಿಮಾನ, ದೇಶಭಕ್ತಿ ಮೂಡಿಸಲು ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬಲು ಜಿಲ್ಲೆಯಲ್ಲಿ ಅರಂಭವಾಗಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ನೆರವಾಗಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಲ್ಲಿನ ರಾಗಿಗುಡ್ಡದ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ಶುಕ್ರವಾರ ಆರಂಭವಾದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಆರಂಭದಿಂದ ರಾಜ್ಯದ ಯುವಕರು ವಿಶೇಷ ಮಹತ್ವದ ಪದವಿ ಮತ್ತು ಸ್ನಾತಕೋತ್ತರ ತರಬೇತಿಗಳನ್ನು ಪಡೆಯಲಿದ್ದಾರೆ. ಹೆಚ್ಚಿನ ಯುವಕರು ರಕ್ಷಣಾ ಘಟಕಗಳಲ್ಲಿ ಉದ್ಯೋಗಾವಕಾಶ ಪಡೆಯಲಿದ್ದಾರೆ ಎಂದರು.

ADVERTISEMENT

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ದೇಶದ ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಯುವಕರಿಗೆ ಇಲ್ಲಿನ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುವುದರಿಂದ ಉದ್ಯೋಗಾವಕಾಶ ಲಭಿಸಲಿವೆ. ಅದಕ್ಕಾಗಿ ರಾಜ್ಯವು ರಕ್ಷಾ ವಿವಿಯೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ ಎಂದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದಂತೆ ಇಲ್ಲಿ ಶಿಕ್ಷಣ ಪಡೆವ ಪ್ರತಿ ವಿದ್ಯಾರ್ಥಿಯೂ ಭಾರತದ ಅನರ್ಘ್ಯ ರತ್ನಗಳಾಗಿ ಹೊರಹೊಮ್ಮಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿದೆ. ಇಲ್ಲಿನ ಮೂಲ ಸೌಕರ್ಯ, ಸ್ಮಾರ್ಟ್ ಗ್ರಂಥಾಲಯ, ವಿದ್ಯಾರ್ಥಿ ನಿಲಯ, ಅತ್ಯಾಧುನಿಕ ತರಬೇತಿ ಕೇಂದ್ರಗಳು ಸೇರಿದಂತೆ ಭೌತಿಕ ಸ್ವರೂಪದ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹ 10 ಕೋಟಿ ಅನುದಾನ ಮಂಜೂರಾಗಿದೆ’ ಎಂದರು.

ಬೆಂಗಳೂರಿನಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ವರ್ಚುವಲ್ ವ್ಯವಸ್ಥೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಈ ವೇಳೆ ಉಪಸ್ಥಿತರಿದ್ದರು.

ರಾಗಿಗುಡ್ಡದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಮಹಾನಗರ ಪಾಲಿಕೆ ಮೇಯರ್ ಎಸ್. ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ರಕ್ಷಾ ವಿವಿಯ ಧರ್ಮೇಂದ್ರಕುಮಾರ್, ವಿ.ಪಿ. ಸಿಂಗ್‌ ಶೆಖಾವತ್ ಇದ್ದರು.

ಪ್ರಸಕ್ತ ವರ್ಷದಿಂದಲೇ ಬೋಧನೆ ಅರಂಭ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಬೇತಿ ಆರಂಭಗೊಳ್ಳಲಿವೆ. ಪೊಲೀಸ್ ಆಡಳಿತ ಮತ್ತು ಆಂತರಿಕ ಭದ್ರತೆ, ಕೃತಕ ಬುದ್ಧಿಮತ್ತೆ, ಯಂತ್ರಕಲಿಕೆ, ದತ್ತಾಂಶ ವಿಜ್ಞಾನ, ಅಪರಾಧ ಶಾಸ್ತ್ರ ವರ್ತನೆಯ ವಿಜ್ಞಾನ, ಡಿಜಿಟಲ್ ಫೋರೆನ್ಸಿಕ್, ಪೋರೆನ್ಸಿಕ್ ಸೈಕಾಲಜಿ, ಮಿಲಿಟರಿ ವ್ಯವಹಾರಗಳು- ತಂತ್ರಗಳು ಮತ್ತು ಲಾಜಿಸ್ಟಿಕ್ಸ್, ಭದ್ರತೆ ಮತ್ತು ಅಪರಾಧ, ಕಾನೂನುಗಳು, ಕರಾವಳಿ ಕಡಲ ಮುಂತಾದ ವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುವುದು ಎಂದು ರಕ್ಷಾ ವಿವಿಯ ಕುಲಪತಿ ಡಾ. ಆನಂದಕುಮಾರ್ ತ್ರಿಪಾಠಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.