ADVERTISEMENT

ಶಿವಮೊಗ್ಗ | ‘ಬದುಕಿಗೆ ಶರಣರ ಚಿಂತನೆ ಅಳವಡಿಸಿಕೊಳ್ಳಿ’

ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 7:55 IST
Last Updated 11 ಆಗಸ್ಟ್ 2025, 7:55 IST
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು   

ಶಿವಮೊಗ್ಗ: ಸಮಾಜದ ಅಂಕುಡೊಂಕು ತಿದ್ದಿದ ಶಿವ ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಮಾನವೀಯ ಮೌಲ್ಯಗಳು ಪುನರುಜ್ಜೀವನಗೊಳ್ಳುತ್ತವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕೊರಮ ಹಾಗೂ ಕೊರಚ ಜಿಲ್ಲಾ ಸಮುದಾಯದಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ನುಲಿಯ ಚಂದಯ್ಯ ಅವರು ಅಂದಾಜು 48 ವಚನಗಳನ್ನು ರಚಿಸಿದ್ದಾರೆ. ಕಾಯಕ ಎಲ್ಲರ ಜೀವನಕ್ಕೆ ಅತೀ ಅವಶ್ಯಕ ಎನ್ನುವ ಮೂಲಕ ಇಡೀ ಮನುಕುಲಕ್ಕೆ ಶಕ್ತಿ ತುಂಬಿದ್ದಾರೆ ಎಂದರು.  

ADVERTISEMENT

ಬಸವಾದಿ ಶರಣರು ಸಮಾಜದ ಜನರ ಏಳಿಗೆಗೆ ಪೂರಕವಾದ ಸಂದೇಶಗಳನ್ನು ತಮ್ಮ ವಚನಗಳ ಮೂಲಕ ಹೇಳಿದ್ದಾರೆ. ಶರಣರು ಕಾಯಕ ತತ್ವ ಹಾಗೂ ದಾಸೋಹ ತತ್ವವನ್ನು ಜಗತ್ತಿಗೆ ಸಾರಿದ್ದರು. ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿ ಹಲವು ಶರಣರು ಜಿಲ್ಲೆಯಲ್ಲಿ ಜನ್ಮತಾಳಿದ್ದು ಹೆಮ್ಮೆಯ ಸಂಗತಿ ಎಂದರು. 

ಬನವಾಸಿಯ ಮಧುಕೇಶ್ವರ ದೇವಾಲಯದ ಕಲ್ಲು ಮಂಟಪದಲ್ಲಿ ನುಲಿಯ ಚಂದಯ್ಯ, ಅಗ್ಗವಣಿಯ ಹೊನ್ನಯ್ಯ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಹಾಳಿನ ಹಂಪಣ್ಣ ಅವರ ಮೂರ್ತಿಗಳನ್ನು ಅವರವರ ಅಂಕಿತ ನಾಮದೊಂದಿಗೆ ಕೆತ್ತಲಾಗಿದೆ ಎಂದರು. 

ನುಲಿಯ ಚಂದಯ್ಯ ರಚಿಸಿದ 48 ವಚನಗಳಲ್ಲಿ ಅತಿ ಹೆಚ್ಚಿನವು ಕಾಯಕದ ಬಗ್ಗೆ ವಿವರಿಸಿವೆ. ಗುರು ಆಗಲಿ, ಜಂಗಮವಾಗಲಿ ಕಾಯಕವೇ ಮೊದಲು ಮಾಡಬೇಕು ಎಂದು ವಚನಗಳಲ್ಲಿ ತಿಳಿಸಿದ್ದಾರೆ. 28 ವಚನಗಳು ಲಿಂಗ ದೇವರ ಪೂಜೆ ಕುರಿತು ತಿಳಿಸುತ್ತವೆ ಎಂದು ಸಮುದಾಯದ ಮುಖಂಡ ಅನಿಲ್ ಕುಮಾರ್ ಹೇಳಿದರು. 

ನುಲಿಯ ಚಂದಯ್ಯ ಅನುಭವ ಮಂಟಪದಿಂದ ದೂರಾದ ಮೇಲೆ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಳಲ್ಕೆರೆಗೆ ಬಂದರು. ಇಲ್ಲಿಯೂ ಕಾಯಕ ಮುಂದುವರಿಸಿ ದಾಸೋಹ ನಡೆಸಿದರು. ಇಂತಹ ಮಹನೀಯರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲ ಸಾಗಬೇಕು. ಆಗ ಮಾತ್ರ ಅವರ ವಿಚಾರಗಳನ್ನು ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್ ಅಭಿಪ್ರಾಯಪಟ್ಟರು. 

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಹಶೀಲ್ದಾರ್ ರಾಜೀವ್, ಕೊರಚ ಸಮುದಾಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಇದ್ದರು.

ಜಿಲ್ಲಾಡಳಿತ, ಕೊರಮ, ಕೊರಚ ಸಮುದಾಯದಿಂದ ಆಯೋಜನೆ 48 ವಚನಗಳನ್ನು ರಚಿಸಿದ ನುಲಿಯ ಚಂದಯ್ಯ ಕಾಯಕದ ಮಹತ್ವ ಸಾರಿದ ವಚನಕಾರ

‘ಶರಣರ ಆಶಯ ಗೌರವಿಸಿ’ 

ಶಿವಶರಣರು ಹಾಗೂ ನುಲಿಯ ಚಂದಯ್ಯ ಅವರ ಆಶಯಗಳನ್ನು ಗೌರವಿಸಬೇಕು. ಹಗ್ಗ ನೂಲುವ ವೃತ್ತಿಯನ್ನು ಮಾಡುತ್ತಿದ್ದ ಚಂದಯ್ಯನನ್ನು ಕರ್ನಾಟಕದಲ್ಲಿ ನೆಲೆಸಿದ ಕುಳುವ ಸಮುದಾಯ ತನ್ನ ಮೂಲ ಪುರುಷನೆಂದು ಗುರುತಿಸಿಕೊಂಡಿದೆ. ಚಂದಯ್ಯನು ಕಲ್ಯಾಣದಲ್ಲಿ ಮೆದೆ ಹುಲ್ಲಿನಿಂದ ಮಾಡಿದ ನುಲಿಯನ್ನು ಹೊಸೆದು ಹಗ್ಗ ತಯಾರಿಸಿ ಅವುಗಳನ್ನು ಮಾರಿ ಬದುಕುವ ಕಾಯಕ ಜೀವಿಯಾಗಿದ್ದ ಬಗ್ಗೆ ವಚನದಲ್ಲಿ ಉಲ್ಲೇಖಗಳಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.