ADVERTISEMENT

ಹೊಸನಗರ: ಪಿಯು ಕಾಲೇಜು ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:14 IST
Last Updated 11 ಜನವರಿ 2022, 7:14 IST
ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಕಾಲೇಜು ಸ್ಥಳಾಂತರ ಸಂಬಂಧ ಸೋಮವಾರ ಸಮಾಲೋಚನಾ ಸಭೆ ನಡೆಯಿತು
ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಕಾಲೇಜು ಸ್ಥಳಾಂತರ ಸಂಬಂಧ ಸೋಮವಾರ ಸಮಾಲೋಚನಾ ಸಭೆ ನಡೆಯಿತು   

ಹೊಸನಗರ: ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಳಾಂತರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಸ್ತಿಕಟ್ಟೆಯ ಯಡೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜು ಕಲಾ ವಿಭಾಗವನ್ನು ಮಾತ್ರ ಹೊಂದಿದ್ದು, 2020-21ನೇ ಸಾಲಿನಲ್ಲಿ ಶೂನ್ಯ ಫಲಿತಾಂಶ ದಾಖಲಿಸಿದೆ. ಈ ಫಲಿತಾಂಶ ನೆಪವಾಗಿಟ್ಟುಕೊಂಡು ಕಾಲೇಜನ್ನು ಬೇರೆಡೆ ಸ್ಥಳಾಂತರಿಸಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿಗೆ ಈ ಬಗ್ಗೆ ಗಮನಕ್ಕೆ ತರದೇ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ರೈತ ನಾಯಕ ಜಿ.ವಿ.ರವೀಂದ್ರ ಮಾತನಾಡಿ, ‘ಹೋರಾಟದ ಮೂಲಕ ಕಾಲೇಜು ಸ್ಥಾಪನೆಯಾಗಿದೆ. ಸೌಲಭ್ಯಗಳ ಕೊರತೆ ಮತ್ತು ಪ್ರಗತಿಯ ಬಗ್ಗೆ ಇಲಾಖೆ ಒತ್ತು ನೀಡದ ಕಾರಣ ಶೂನ್ಯ ಫಲಿತಾಂಶ ಬಂದಿರಬಹುದು. ಈ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ, ಜನಪ್ರತಿನಿಧಿಗಳೊಂದಿಗೆ ಚರ್ಚಿಸದೇ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸರಿಯಲ್ಲ.ಸ್ಥಳಾಂತರಕ್ಕೆ ಮುಂದಾದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ’ ಎಂಚು ಎಚ್ಚರಿಸಿದರು.

ADVERTISEMENT

ಈ ಬಗ್ಗೆ ಶಾಸಕರು, ಗೃಹ ಸಚಿವರ ಗಮನಕ್ಕೆ ತಂದು ಕಾಲೇಜು ಉಳಿಸಿಕೊಳ್ಳುವ ಬಗ್ಗೆ ಒತ್ತು ನೀಡಲಾಗುವುದು ಎಂದು ನಗರ ಹೋಬಳಿ ಬಗರ್‌ ಹು‌ಕುಂ ಸಮಿತಿ ಅಧ್ಯಕ್ಷ ಬಂಕ್ರಿಬೀಡು ಮಂಜುನಾಥ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ‘ಮಾಸ್ತಿಕಟ್ಟೆ ಕಾಲೇಜು ಸ್ಥಳಾಂತರದಲ್ಲಿ ನಮ್ಮ ಪಾತ್ರವಿಲ್ಲ. ಇಲ್ಲೆ ಇರುವುದಕ್ಕೆ ಪ್ರಯತ್ನ ಮಾಡುತ್ತೇನೆ. ರಾಜಕೀಯದಲ್ಲಿದ್ದ ಮೇಲೆ ಆಪಾದನೆಗಳು ಸಹಜ’ ಎಂದು ಸ್ಪಷ್ಟನೆ ನೀಡಿದರು.

ಈ ವೇಳೆ ಎಸ್‌ಡಿಸಿ ಸಮಿತಿ ಅಧ್ಯಕ್ಷ ವಿದ್ಯಾನಂದರಾವ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ. ಕೃಷ್ಣಮೂರ್ತಿ, ಪ್ರಕಾಶಗೌಡ, ಎಪಿಎಂಸಿ ಸದಸ್ಯ ಕಣ್ಕಿ ಮಹೇಶ್, ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಗರ ನಿತಿನ್, ರವೀಂದ್ರ ಪ್ರಭು, ಪುರುಷೋತ್ತಮ, ಕೃಷ್ಣಾನಂದ ಕಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.