ADVERTISEMENT

ಜಟಿಲ ಸಮಸ್ಯೆಗಳಿಗೆ ಅನ್ವೇಷಣೆಯೇ ಪರಿಹಾರ: ಐಐಟಿ ನಿರ್ದೇಶಕ ಡಾ.ಸದಗೋಪನ್

ಪಿಇಎಸ್ ಕಾಲೇಜು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:07 IST
Last Updated 20 ಮೇ 2019, 13:07 IST
ಶಿವಮೊಗ್ಗ ಪಿಇಎಸ್‌ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭವನ್ನು ಬೆಂಗಳೂರು ಐಐಟಿ ನಿರ್ದೇಶಕ ಡಾ.ಸದಗೋಪನ್ ಉದ್ಘಾಟಿಸಿದರು.
ಶಿವಮೊಗ್ಗ ಪಿಇಎಸ್‌ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭವನ್ನು ಬೆಂಗಳೂರು ಐಐಟಿ ನಿರ್ದೇಶಕ ಡಾ.ಸದಗೋಪನ್ ಉದ್ಘಾಟಿಸಿದರು.   

ಶಿವಮೊಗ್ಗ: ಅನ್ವೇಷಣೆಯ ಮುಖಾಂತರ ಎಂತಹ ಜಟಿಲ ಸಮಸ್ಯೆಗಳಿಗೂ ಸುಲಭ ಪರಿಹಾರ ಕಂಡುಕೊಳ್ಳಬಹುದು. ಸಮಾಜಮುಖಿಯಾಗಿ ನಿಭಾಯಿಸಬಹುದು ಎಂದು ಬೆಂಗಳೂರು ಐಐಟಿ ನಿರ್ದೇಶಕ ಡಾ.ಸದಗೋಪನ್ ಪ್ರತಿಪಾದಿಸಿದರು.

ಪಿಇಎಸ್‌ ಕಾಲೇಜು ಪ್ರೇರಣಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ಟೀವ್ ಜಾಬ್ಸ್‌ ಅವರ ತತ್ವಸಿದ್ಧಾಂತಗಳಲ್ಲಿ ಜ್ಞಾನದ ಹಸಿವಿಗೆ ಪ್ರಾಶಸ್ತ್ಯ ನೀಡಲಾಗಿದೆ. ಜ್ಞಾನಿಯಾದವ ತನಗೆ ಎಲ್ಲಾ ವಿಚಾರಗಳೂತಿಳಿದಿವೆ ಎಂಬ ಅಹಃ ಮೊದಲು ಬಿಡಬೇಕು. ಕಠಿಣ ಪರಿಶ್ರಮ, ಹೊಸತನದ ಹುಡುಕಾಟ ಇರಬೇಕು. ಜಗತ್ತಿನ ಪ್ರತಿ ಚಲನವಲನಗಳ ಬಗ್ಗೆಯೂ ಕುತೂಹಲಿಗಳಾಗಿರಬೇಕು. ಹೊಸ ವಿಚಾರಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರ್ಣಗೊಳಿಸಿದ ಪ್ರಮಾಣಪತ್ರ ಪ್ರದಾನ ಮಾಡುವ ಪದ್ಧತಿ ಉಪನಿಷತ್ ಕಾಲದಿಂದಲೂ ಪ್ರಚಲಿತದಲ್ಲಿದೆ. ಸಾವಿರಾರು ವರ್ಷಗಳ ಹಿಂದೆಯೆ ಭಾರತದಲ್ಲಿ ಉನ್ನತ ಮಟ್ಟದ ಶಿಕ್ಷಣ ದೊರೆಯುತ್ತಿತ್ತು. ಭಾರತೀಯ ಸಂಸ್ಕೃತಿಗನುಗುಣವಾಗಿ ಶಿಕ್ಷಣ ನೀಡುತ್ತಿದ್ದರು. ಈಗಿನ ವಿದ್ಯಾರ್ಥಿಗಳು ಮೂಲ ವಿಚಾರಧಾರಣೆಗಳನ್ನು ಮೈಗೂಡಿಸಿಕೊಳ್ಳುತ್ತಾ ಹೊಸ ಪರಿಕಲ್ಪನೆಯ ಹಾದಿಯಲ್ಲಿ ಸಾಗಬೇಕು. ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಬೇಕು. ಅದಕ್ಕಾಗಿ ಅಧ್ಯಾಪಕರ ಮಾರ್ಗದರ್ಶನ ಪಡೆಯಬೇಕು ಎಂದರು.

‘ಕೆ 2 ಟೆಕ್ನಾಲಜಿ ಸಲ್ಯೂಷನ್ಸ್’ ಸಂಸ್ಥಾಪಕ ನಿರ್ದೇಶಕ ಅನಂತ್ ಆರ್. ಕೊಪ್ಪಾರ್ ಮಾತನಾಡಿ, ಜೀವನದಲ್ಲಿ ಕಲಿಕೆ ನಿರಂತರವಾಗಿರಬೇಕು. ಜೀವನದಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನು ಎದೆಗುಂದದೆ ಧೈರ್ಯವಾಗಿ ಎದುರಿಸಬೇಕು. ಅನ್ವೇಷಣೆಗೆ ಆದ್ಯತೆ ನೀಡಬೇಕು. ವೃತ್ತಿಪರ ಕೌಶಲ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಜಟಿಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ಲೋಪದೋಷ ಕಂಡು ಹಿಡಿದು ಅನ್ವೇಷಣೆಯ ಮುಖಾಂತರ ಪರಿಹರಿಸಿಕೊಳ್ಳುವುದು ಇಂದಿನ ತಾಂತ್ರಿಕ ಯುಗದಲ್ಲಿ ಆವಶ್ಯಕ. ಸಂಶೋಧನೆಯಲ್ಲಿ ಇಂದು ಭಾರತ ಚೀನಾಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ. ಎಲ್ಲಾ ರಂಗಗಳಲ್ಲಿಯೂ ವಿಪುಲ ಅವಕಾಶಗಳಿವೆ. ಅಂತಹ ಅವಕಾಶಗಳನ್ನು ಯುವ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವೃತ್ತಿ ನೈಪುಣ್ಯತೆ ಇದ್ದರೆ ಉದ್ಯೋಗ ಸುಲಭವಾಗಿ ಲಭಿಸುತ್ತದೆ. ಸ್ವಂತ ಬಲದ ಮೇಲೆ ಸಾಧನೆ ಮಾಡುವ ಮನೋಭಾವ ಇರಬೇಕು. ಅವರ ಕನಸು ಅವರೇ ನನಸು ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ6ನೇ ರ್‍ಯಾಂಕ್ ಪಡೆದ ಎಂಬಿಎ ವಿದ್ಯಾರ್ಥಿನಿ ಸೈಯಿದಾ ಫಾತಿಮ ಅವರನ್ನು ಸನ್ಮಾನಿಸಲಾಯಿತು. ಪಿಎಚ್‌ಡಿ ಪಡೆದ ಇಬ್ಬರು, ಎಂಜಿನಿಯರಿಂಗ್, ಬಿಬಿಎ, ಬಿಸಿಎ , ಬಿಕಾಂ , ಎಂಕಾಂ ಪದವಿ ಪೂರೈಸಿದ ಹಾಗೂ ಎಂಬಿಎ ಪದವಿ ಪಡೆದ 583 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಸಂಸ್ಥೆಯ ಖಜಾಂಚಿ ಬಿ.ವೈ. ವಿಜಯೇಂದ್ರ, ಟ್ರಸ್ಟಿ ಎಸ್‌.ವೈ.ಅರುಣಾದೇವಿ, ಉಮಾದೇವಿ, ಆಡಳಿತಾಧಿಕಾರಿ ಡಾ.ನಾಗರಾಜ್, ಪ್ರಾಂಶುಪಾಲ ಡಾ. ಚ್ಯತನ್ಯಕುಮಾರ್, ಜಗದೀಶ್,ಪ್ರೊ ಸಾಯಿಲತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.