ADVERTISEMENT

ಸಂಜೆ 6ರವರೆಗೂ ಫಾರ್ಮಸಿ ಸೇವೆ ಲಭ್ಯ

ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ

​ಪ್ರಜಾವಾಣಿ ವಾರ್ತೆ
Published 30 ಮೇ 2021, 5:15 IST
Last Updated 30 ಮೇ 2021, 5:15 IST
ಸಾಗರದ ಉಪವಿಭಾಗೀಯ ಆಸ್ಪತ್ರೆಯ ಫಾರ್ಮಸಿ ವಿಭಾಗಕ್ಕೆ ಶನಿವಾರ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾಗರದ ಉಪವಿಭಾಗೀಯ ಆಸ್ಪತ್ರೆಯ ಫಾರ್ಮಸಿ ವಿಭಾಗಕ್ಕೆ ಶನಿವಾರ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಸಾಗರ: ರೋಗಿಗಳ ಹಿತದೃಷ್ಟಿಯಿಂದ ಉಪವಿಭಾಗೀಯ ಆಸ್ಪತ್ರೆಯ ಫಾರ್ಮಸಿ ವಿಭಾಗವನ್ನು ಸಂಜೆ 6 ಗಂಟೆಯವರೆಗೆ ತೆರೆದು ಅಗತ್ಯ ಸೇವೆ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ತಿಳಿಸಿದರು.

ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶನಿವಾರ ಫಾರ್ಮಸಿ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಇಷ್ಟು ದಿನಗಳ ಕಾಲ ಫಾರ್ಮಸಿಯಲ್ಲಿ ಸಂಜೆ 4.30ರವರೆಗೆ ಔಷಧ ನೀಡಲಾಗುತಿತ್ತು. ಕೊರೊನಾ ಕಾರಣದಿಂದ ಈ ಸೇವೆಯನ್ನು ಸಂಜೆ 6ರ ನಂತರವೂ ವಿಸ್ತರಿಸಲಾಗಿದೆ. ಅಗತ್ಯ ಬಿದ್ದರೆ ದಿನದ 24 ಗಂಟೆಯೂ ಫಾರ್ಮಸಿ ತೆರೆದು ಸೇವೆ ನೀಡುವಂತೆ ತಿಳಿಸಲಾಗಿದೆ’ ಎಂದರು.

‘ಸಾಗರ ಉಪವಿಭಾಗೀಯ ಆಸ್ಪತ್ರೆ ಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಪ್ರಥಮ್ ಖಾಸಗಿ ಆಸ್ಪತ್ರೆಯಲ್ಲಿ ಇತರೆ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ಈ ಆಸ್ಪತ್ರೆಗೆ ಜಿಲ್ಲಾಡಳಿತ ಇಬ್ಬರು ವೈದ್ಯರನ್ನು ನೇಮಕ ಮಾಡಿದ್ದು, ಅಲ್ಲಿಯೂ ಉತ್ತಮ ಆರೋಗ್ಯಸೇವೆಯನ್ನು ಕೋವಿಡೇತರ ರೋಗಿಗಳಿಗೆ ನೀಡಲಾಗುತ್ತಿದೆ. ತಾಯಿ–ಮಗು ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಗರ್ಭೀಣಿಯರಿಗೆ ಹೆರಿಗೆ ಮಾಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಹ ಪ್ರಕರಣವನ್ನು ಉಪವಿಭಾಗೀಯ ಆಸ್ಪತ್ರೆಯಲ್ಲಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಪದೇಪದೇ ಕೊವಿಡ್ ವಾರ್ಡ್‌ ಗಳಿಗೆ ರೋಗಿಗಳ ಸಂಬಂಧಿಕರು ಬಂದು ಹೋಗುವ ಜೊತೆ ಅವರು ಹೊರಗೆ ತಿರುಗಿ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ. ಇದರಿಂದಾಗಿ ಕೋವಿಡ್ ವಾರ್ಡ್‌ಗೆ ಭದ್ರತೆ ಕಲ್ಪಿಸಲಾಗಿದೆ. ರೋಗಿಗಳನ್ನು ತುರ್ತು ಸಂದರ್ಭದಲ್ಲಿ ಭೇಟಿಯಾಗಲು ಪಾಸ್ ವ್ಯವಸ್ಥೆ ಮಾಡಲಾಗಿದೆ. ಶಾಸಕರು ಮತ್ತು ಉಪವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ರೋಗಿಗಳಿಗೆ ಗುಣಮಟ್ಟದ ಆರೋಗ್ಯಸೇವೆ ಸಿಗಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಹಿರಿಯ ಫಾರ್ಮಸಿಸ್ಟ್ ವೈ.ಮೋಹನ್ ಮಾತನಾಡಿ, ‘ಭಾನುವಾರದಿಂದ ಫಾರ್ಮಸಿಯನ್ನು ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೂ ತೆರೆಯಲಾಗುತ್ತಿದೆ. ಶಾಸಕರು, ಉಪವಿಭಾಗಾಧಿಕಾರಿಗಳು ಮತ್ತು ಸಿವಿಲ್ ಸರ್ಜನ್ ಅವರ ಸೂಚನೆ ಮೇರೆಗೆ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

ಹಿರಿಯ ಶುಶ್ರೂಷಕಿ ಜುಬೇದಾ ಆಲಿ, ಫಾರ್ಮಸಿ ವಿಭಾಗದ ಜಿ. ಮಂಜುನಾಥ್, ಸತೀಶ್, ಸೌಂದರ್ಯ, ಸುಷ್ಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.