ADVERTISEMENT

‘ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ’

ಕಾರ್ಮಿಕ ಭವನ ಶಂಕುಸ್ಥಾಪನಾ ಸಮಾರಂಭದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 2:29 IST
Last Updated 29 ಜೂನ್ 2022, 2:29 IST
ಭದ್ರಾವತಿ ಸಮೀಪದ ಉಜ್ಜೀನಿಪುರ ಬಳಿ ನಿರ್ಮಿಸಲು ಉದ್ದೇಶಿಸಿರುವ ಕಾರ್ಮಿಕ ಭವನ ಶಂಕುಸ್ಥಾಪನಾ ಸಮಾರಂಭಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದರು. ಸಂಸದ ಬಿ.ವೈ.ರಾಘವೇಂದ್ರ, ಸಚಿವ ನಾರಾಯಣಗೌಡ, ಶಾಸಕ ಬಿ.ಕೆ.ಸಂಗಮೇಶ್ವರ  ಹಾಜರಿದ್ದರು.
ಭದ್ರಾವತಿ ಸಮೀಪದ ಉಜ್ಜೀನಿಪುರ ಬಳಿ ನಿರ್ಮಿಸಲು ಉದ್ದೇಶಿಸಿರುವ ಕಾರ್ಮಿಕ ಭವನ ಶಂಕುಸ್ಥಾಪನಾ ಸಮಾರಂಭಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದರು. ಸಂಸದ ಬಿ.ವೈ.ರಾಘವೇಂದ್ರ, ಸಚಿವ ನಾರಾಯಣಗೌಡ, ಶಾಸಕ ಬಿ.ಕೆ.ಸಂಗಮೇಶ್ವರ  ಹಾಜರಿದ್ದರು.   

ಭದ್ರಾವತಿ: ‘ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ ಸಹಯೋಗದಲ್ಲಿ ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಉಜ್ಜೀನಿಪುರ ಬಳಿ ₹ 5 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನಿರ್ಮಿಸಲು ಉದ್ದೇಶಿಸಿರುವ ಕಾರ್ಮಿಕ ಭವನದ ಶಂಕುಸ್ಥಾಪನೆಯನ್ನು ಮಂಗಳವಾರ ನೆರವೇರಿಸಿ ಅವರು ಮಾತನಾಡಿದರು.

‘ಕಟ್ಟಡ ಕಟ್ಟುವ ಕಾರ್ಮಿಕರ ಮಕ್ಕಳು ಪೈಲೆಟ್ ಆಗಿ ವಿಮಾನ ಚಲಾಯಿಸುವ ಹಂತಕ್ಕೆ ಬೆಳೆಯುವ ಹೆಬ್ಬಯಕೆ ಹೊತ್ತು ಪ್ರತಿ ಅಭ್ಯರ್ಥಿಗೆ ₹37 ಲಕ್ಷ ವೆಚ್ಚದಲ್ಲಿ ತರಬೇತಿ ನೀಡುವ ಜತೆಗೆ ತಿಂಗಳಿಗೆ ₹6,000 ಶಿಷ್ಯವೇತನ ನೀಡಲಾಗುವುದು. ಇದಕ್ಕಾಗಿ ಧಾರವಾಡ ಹಾಗೂ ಬೆಂಗಳೂರಿನಲ್ಲಿ ತರಬೇತಿ ನೀಡಲು ಸ್ಥಳವನ್ನು ಸಹ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಯುವಜನ ಸೇವೆ, ಕ್ರೀಡಾ ಸಚಿವರಾದ ನಾರಾಯಣಗೌಡ ಅವರು ನೀಡಿದ ಸೂಚನೆಯಂತೆ ಈ ಕ್ರಮವನ್ನು ನಮ್ಮ ಕಲ್ಯಾಣ ಮಂಡಳಿಯಿಂದ ಕೈಗೊಂಡಿದ್ದು, ಪ್ರತಿ ಜಿಲ್ಲೆಯಿಂದ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕೆಲಸ ಮಾಡಲಾಗುವುದು’ ಎಂದರು.

‘ಕಾರ್ಮಿಕ ಭವನ ನಿರ್ಮಾಣಕ್ಕೆ ಸದ್ಯ ₹5 ಕೋಟಿ ಬಿಡುಗಡೆ ಮಾಡಲಾಗಿದೆ. ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರೂಪಿಸಿರುವ ಈ ಭವನ ಕಾರ್ಮಿಕರಿಗೆ ನೆರವಾಗಲಿದೆ. ಇಲ್ಲಿನ ವಿಐಎಸ್ಎಲ್, ಎಂಪಿಎಂ ಕಾರ್ಖಾನೆ ಅಭ್ಯುದಯಕ್ಕೆ ಬದ್ಧವಾಗಿ ಕೆಲಸ ಮಾಡಲಾಗುವುದು’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕ ಬಿ.ಕೆ.ಸಂಗಮೇಶ್ವರ, ಎಸ್.ದತ್ತಾತ್ರೀ, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾದ್ಯಕ್ಷ ಚನ್ನಪ್ಪ, ಸುದೀಪ ಕುಮಾರ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ವೈಶಾಲಿ ಉಪಸ್ಥಿತರಿದ್ದರು.

‘ಹಿಸ್ಟರಿ ಹೇಳುವ ಸಮಯವಲ್ಲ’

‘ನಾನು, ಹೆಬ್ಬಾರ್ ಒಂದೇ ಪಕ್ಷದಲ್ಲಿದ್ದವರು. ಅವರು ನಮ್ಮ ಪಕ್ಷ ಬಿಟ್ಟು ಬಿಜೆಪಿ ಸೇರಿ ಮಂತ್ರಿ ಆಗುವ ವೇಳೆ, ‘ಕಾರ್ಮಿಕ ಮಂತ್ರಿಯಾಗಿ ಉತ್ತಮ ಕೆಲಸ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ’ ಎಂದು ನನ್ನ ಬಳಿ ಹೇಳಿದ್ದರು. ನನ್ನ ಅವರ ನಡುವಿನ ಸಂಬಂಧದ ಹಿಸ್ಟರಿ ಬಹಳ ಇದೆ. ಅದು ಈಗ ಹೇಳುವ ಸಮಯವಲ್ಲ’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದಾಗ ಎಲ್ಲರೂ ನಗೆಗಡಲಲ್ಲಿ ತೇಲಿದರು.

‘ತೊಂದ್ರೆ ಆದ್ರೆ ನಿಮ್ಮ ಪರ ಇರ್ತೀವಿ’

‘ಶಾಸಕ ಸಂಗಮೇಶ್ವರ ಅವರು ನನ್ನ ಹಾಗೂ ಸಂಸದ ರಾಘವೇಂದ್ರ ಅವರ ಪರವಾಗಿ ಬಹಳ ಒಳ್ಳೆಯ ಮಾತು ಆಡಿದ್ದಾರೆ. ಇದರಿಂದ ಅವರಿಗೆ ತೊಂದ್ರೆ ಆದ್ರೆ ನಾವು ಅವರ ಬೆಂಬಲಕ್ಕೆ ಇರ್ತೀವಿ’ ಎಂದು ಶಿವರಾಮ ಹೆಬ್ಬಾರ್‌ ಚಟಾಕಿ ಹಾರಿಸಿ, ಸಂಗಮೇಶ್ವರ ಅವರ ಕೈಗೆ ಹೊಡೆದು ಹಸ್ತಲಾಘವ ನೀಡಿದ್ದು ನಗುವಿನ ಅಲೆಯನ್ನು ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.