ADVERTISEMENT

ಬಿಲ್ಲೇಶ್ವರ: ಇಬ್ಬರು ಶಿಕ್ಷಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:22 IST
Last Updated 5 ಫೆಬ್ರುವರಿ 2023, 7:22 IST

ರಿಪ್ಪನ್‌ಪೇಟೆ: ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದೆ.

ತಿಂಗಳ ಹಿಂದೆ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಅನುಚಿತ ವರ್ತನೆ ತೋರಿದ್ದು, ನೊಂದ ಬಾಲಕಿ ತಾಯಿಯ ಬಳಿ ತಿಳಿಸಿದ್ದಾಳೆ. ಆಗ ಬಾಲಕಿಯ ತಾಯಿ ಶಾಲೆಯ ಶಿಕ್ಷಕಿ ಬಳಿ ತೆರಳಿ, ‘ಶಿಕ್ಷಕನಿಗೆ ಹೆಣ್ಣು ಮಕ್ಕಳ ಬಳಿ ಯೋಗ್ಯ ರೀತಿಯಲ್ಲಿ ವರ್ತಿಸುವಂತೆ ತಿಳಿ ಹೇಳಿ’ ಎಂದು ಹೇಳಿದ್ದಾರೆ.

ಆದರೆ ಶಿಕ್ಷಕಿ ಘಟನೆಯ ಬಗ್ಗೆ ಶಿಕ್ಷಕರ ಪರವಾಗಿ ವಕಾಲತ್ತು ವಹಿಸಿ ಮಾತನಾಡಿ, ‘ಇನ್ನೊಮ್ಮೆ ಈ ರೀತಿ ದೂರಿದರೆ ನಿನ್ನನ್ನು ಶಾಲೆಯಿಂದ ಟಿಸಿ ಕೊಟ್ಟು ಕಳಿಸುವೆ ಎಂದು ವಿದ್ಯಾರ್ಥಿನಿಗೆ ಎಚ್ಚರಿಸಿದ್ದಾರೆ.

ADVERTISEMENT

ನೊಂದ ಬಾಲಕಿಯ ಪೋಷಕರು ಈ ಕುರಿತು ಎಸ್‌ಡಿಎಂಸಿ ಗಮನಕ್ಕೆ ತರಲು ಮುಂದಾಗಿದ್ದಾರೆ. ಸುದ್ದಿ ತಿಳಿದ
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿಯ ಪಿಎಸ್‌ಐ ಸುಷ್ಮಾ ನೇತೃತ್ವದ ತಂಡ ಬಾಲಕಿಯ ಮನೆಗೆ ತೆರಳಿ ವಿದ್ಯಾರ್ಥಿನಿಯ ಅಹವಾಲನ್ನು ಆಲಿಸಿ, ವಿಚಾರಣೆಗಾಗಿ ಶಿವಮೊಗ್ಗ ಸುರಭಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಶಾಲೆಯಲ್ಲಿ ಶಿಕ್ಷಕ ನೀಡಿದ ಕಿರುಕುಳದ ಬಗ್ಗೆ ತಾಯಿಯ ಸಮಕ್ಷಮದಲ್ಲಿ ಬಾಲಕಿ ನೀಡಿದ ಹೇಳಿಕೆ ನಿಡಿದ್ದಾಳೆ.

ಇದರ ಆಧಾರದಲ್ಲಿ ರಿಪ್ಪನ್‌ಪೇಟೆ ಠಾಣೆಯಲ್ಲಿ ಪಿಎಸ್ಐ ಶಿವಾನಂದ್ ಕೋಳಿ ಅವರು ಮಂಗಳವಾರ ಶಿಕ್ಷಕ ಹಾಗೂ ಶಿಕ್ಷಕಿ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳ್ಳನ ಬಂಧನ: ನಾಲ್ಕು ಬೈಕ್‌ಗಳ ವಶ

ಶಿವಮೊಗ್ಗ: ಬೈಕ್‌ ಕಳ್ಳನನ್ನು ಬಂಧಿಸಿರುವ ಇಲ್ಲಿನ ಸಿಇಎನ್‌ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಪಾಟೀಲ್ ನೇತೃತ್ವದ ತಂಡ ಆರೋಪಿಯಿಂದ ₹1 ಲಕ್ಷ ಮೌಲ್ಯದ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿ ತಾಲ್ಲೂಕಿನ ಅಗರದಹಳ್ಳಿ ಬಳಿಯ ಹಂಚಿನ ಸಿದ್ದಾಪುರದ ನಿವಾಸಿ ಆರ್.ಅರುಣ್ (22) ಬಂಧಿತ ಆರೋಪಿ.

2022ರ ನವೆಂಬರ್ 10ರಂದು ಶಿವಮೊಗ್ಗದ ಆನಂದ ರಾವ್ ಬಡಾವಣೆಯ ಅಬ್ದುಲ್ ರಜಾಕ್ (24) ತಮ್ಮ ಹೀರೊ ಹೊಂಡಾ ಸ್ಫ್ಲೆಂಡರ್ ಪ್ಲಸ್ ಬೈಕನ್ನು ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಶಂಕರ ಮಠ ರಸ್ತೆಯ ಫೋರ್ಡ್ ಶೋ ರೂಂ ಎದುರು ರಸ್ತೆಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಬೈಕ್ ಕಳ್ಳತನ ಆಗಿದ್ದು, ಈ ಬಗ್ಗೆ
ಪೊಲೀಸ್ ಠಾಣೆಯಲ್ಲಿದ ಊರು ದಾಖಲಿಸಿದ್ದರು.

ಪ್ರಕರಣದ ತನಿಖೆಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ವಿಶೇಷ ತಂಡ ರಚಿಸಿದ್ದರು. ಖಚಿತ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಬೈಕ್‌ಗಳ ಕಳ್ಳತನ ಪ್ರಕರಣ ಬಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.